ಪುಟ:Kannadigara Karma Kathe.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂಕುರಾಭಿವೃದ್ಧಿ

೨೯

ಬುಡದಲ್ಲಿ ಬಂದು ನಿಂತಿದ್ದೆನು ! ಮೊದಲು ನಿನ್ನನ್ನು ನೋಡಿದ ಕೂಡಲೇ ನಾನು ಆಶ್ಚರ್ಯಮಗ್ನನಾದೆನು. ಅಹಹ ! ಪ್ರಿಯೇ, ಮೆಹರ್ಜಾನ, ನಮ್ಮ ಕಾಳಿದಾಸಾದಿ ಕವಿಗಳು ಸ್ತ್ರೀಮುಖವನ್ನು ಕಮಲಕ್ಕೆ, ಹಾಗು ಚಂದ್ರನಿಗೆ ಹೋಲಿಸಿದ್ದೇನು ಆಟಕ್ಕಲ್ಲವೆಂಬುದನ್ನು ನಾನು ಇಂದು ಮನಗಂಡನು! ಪುಷ್ಕರಣಿಯಲ್ಲಿ ಒಮ್ಮೆಲೆ ಮೂರು ಚಂದ್ರಗಳು ಎಲ್ಲಿಂದ ಬಂದವೆಂಬುದು ನನಗೆ ತಿಳಿಯದಾಯಿತು. ಆಕಾಶದಲ್ಲಿಯೊಬ್ಬ, ಕ್ರೀಡಾ ನೌಕೆಯೊಲ್ಲೊಬ್ಬ, ಪುಷ್ಕರಣಿಯ ಜಲದಲ್ಲಿಯೊಬ್ಬ ಹೀಗೆ ಮೂವರು ಚಂದ್ರರು !! ಮುಂದೆ ನೀನು ಮಂಜುಳ ಗಾನದಿಂದ ನನ್ನ ಭ್ರಾಂತಿಯನ್ನು ದೂರಮಾಡದಿದ್ದರೆ, ನಾನು ಎಲ್ಲಿ ಭ್ರಮಿಷ್ಠನೇ ಆಗಿ ಹೋಗುತ್ತಿದ್ದೆನೋ ಏನೋ ?

ಮೆಹರ್ಜಾನ-ಸಾಕು, ಏನಾದರೂ ಬಣ್ಣದ ಮಾತು ಆಡಿ ನನ್ನನ್ನು ರಮಿಸಬೇಡಿರಿ. ಈಗ ಎಂಟು ದಿನ ನನ್ನನ್ನು ಮರೆತದ್ದನ್ನು ಮುಚ್ಚಿಕೊಳ್ಳಲಿಕ್ಕೆ ಯತ್ನಿಸುವ ಹಾಗೆ ತೋರುತ್ತದೆ ; ಆದರೆ ಇಂಥ ಯತ್ನಗಳಿಗೆ ನಾನು ಈಗ ಮೋಸಹೋಗುವ ಹಾಗಿಲ್ಲ.

ತರುಣ-ನಿನ್ನನ್ನು ಮೋಸಗೊಳಿಸಲಿಕ್ಕೆ ಯಾರು ಯತ್ನಿಸಿದರು ? ಪ್ರಿಯೆ, ಮೆಹರ್ಜಾನ, ನಿನ್ನನ್ನು ಮೋಸಗೊಳಿಸುವುದಕ್ಕಾಗಿ ನಾನು ಏನಾದರೂ ಮಾತಾಡುತ್ತೇನೆನ್ನುವ ಹಾಗೆ ನಿನಗೆ ತೋರುತ್ತದೇನು ? ಹೋದ ವರ್ಷ ನಿನ್ನ ಬಳಿಗೆ ಆಗಾಗ್ಗೆ ಬರುತ್ತಿರುವ ಹಾಗೆ, ಈ ವರ್ಷ ನಾನು ಬಾರದಿರುವದಕ್ಕೆ ಕಾರಣವುಂಟು. ಹಿರಿಯರು ಇರುವತನಕವರ ಸಂಗಡ ಬೇರೆ ಬೇರೆ ಮುಸಲ್ಮಾನ ಬಾದಶಹರ ಬಳಿಗೆ ಹೋಗಿ ಅವರೊಡನೆ ಮಾಡುವ ಆಲೋಚನೆಗಳನ್ನು ಕೇಳುವದಷ್ಟೇ ನನ್ನ ಕೆಲಸವಾಗಿತ್ತು. ಈಗ ಹಿರಿಯರು ಸ್ವರ್ಗಸ್ಥರಾಗಿರುವದರಿಂದ ಅವರ ಕೆಲಸಗಳನ್ನು ನಾನು ಜವಾಬ್ದಾರಿಯಿಂದ ಮಾಡಬೇಕಾಗಿದೆ. ಕೃಷ್ಣದೇವರಾಯರು ಚಿಟಿಗಿಗೊಮ್ಮೆ ಮುಟುಗಿಗೊಮ್ಮೆ ಕರಿಸಿ ಆಲೋಚನೆಗಳನ್ನು ಕೇಳುವರು. ಅವರು ನನಗೆ -ರಾಮರಾಜಾ, ನೀನು ತೀರ ತರುಣನಿರುವೆಯೆಂಬದೇನೋ ನಿಜ ; ಆದರೆ ನಿನ್ನ ಹಿರಿಯರ ಕೈಯಲ್ಲಿ ನೀನು ನುರಿತವನಿರುವದರಿಂದಾಗಿ, ಜಾತ್ಯಾ ನೀನು ಯೋಗ್ಯತೆಯವನೆಂಬ ಕಾರಣದಿಂದಾಗಲಿ ನಿನ್ನ ಹಿರಿಯರ ಮಂತ್ರಿಪದವನ್ನು ಕೊಡುವ ಬದಲು ಎರಡನೆಯದೇನನ್ನಾದರೂ ನಿನಗೆ ಕೊಡಬೇಕೆಂದು ಮಾಡಿರುವೆನು, ಎಂದು ಹೇಳಿದ್ದಾರೆ. ಹೀಗಿರಲು, ನಾನು ಎಂಟು ದಿನ ಬರಲಿಲ್ಲವೆಂಬದಿಷ್ಟೇ ಕಾರಣದಿಂದ ನೀನು ಹೀಗೆ ನಿಷ್ಠುರಳಾಗಬಹುದೋ ?