ವಿಷಯಕ್ಕೆ ಹೋಗು

ಪುಟ:Kannadigara Karma Kathe.pdf/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೮
ಕನ್ನಡಿಗರ ಕರ್ಮಕಥೆ

ಸಲ್ಲದು. ಮಹಾ ರಾಜರೇ, ಮೆಹರ್ಜಾನಳು ಅಭಿಮಾನ ಸ್ವಭಾವದವಳು. ಹೀಗೆ ತಾವು ಮೇಲೆ ಮೇಲೆ ಆಕೆಯನ್ನು ವಂಚಿಸಿ ಹೋಗುವದರಿಂದ ವಿಕಲ್ಪವನ್ನು ಎಣಿಸಿಯಾಳು, ಕಾರ್ಯ ನಿಮಿತ್ತವಾಗಿ ನಾಳೆ ಹೋಗಲೇ ಬೇಕಾಗಿರುವದೆಂದು ನೀವು ಹೇಳಿದರೆ, ಆಕೆಯು ಬೇಡೆನ್ನುವಳೋ ? ಮೆಹರ್ಜಾನಳು ಇಂದಿನ ಇಡಿಯ ರಾತ್ರಿ ಕಣ್ಣಿಗೆ ಕಣ್ಣು ಹಚ್ಚಿರುವುದಿಲ್ಲ, ತಮ್ಮ ಎಂಟು ದಿನದ ವಿಯೋಗದಿಂದ ಆಕೆ ಒಂದೇ ಸಮನೆ ಚಡಪಡಿಸುತ್ತಿರುವಾಗ, ಇಂದು ತಮ್ಮ ದರ್ಶನವಾಗಿ ಆಕೆಗೆ ಸ್ವಲ್ಪ ಸಮಾಧಾನವಾಗಿದೆ. ಇಂಥ ಸ್ಥಿತಿಯಲ್ಲಿ ತಾವು ಗಾಯದ ಮೇಲೆ ಬರೆಕೊಟ್ಟಂತೆ ಮಾಡಿ ಆಕೆಯನ್ನು ವ್ಯಥೆಪಡಿಸಬಾರದು. ಆಕೆಯ ಕೋಮಲ ಹೃದಯವನ್ನು ನಾನು ಪೂರಾ ಬಲ್ಲೆನು. ಆಕೆಯು ಬಹು ಸುಜನೆಯು, ಲಜ್ಜಾಶೀಲಳು. ಒಂದು ಗುಪ್ತವಾದ ಸಂಗತಿಯನ್ನು ನಿಮ್ಮ ಮುಂದೆ ಹೇಳಬೇಕು ಎಂದು ಈಗ ಒಂದು ತಿಂಗಳಿಂದ ಆತುರಪಟ್ಟು, ಕಡೆಗೆ ಲಜ್ಜೆಯ ಮೂಲಕ ಅದನ್ನು ಹೇಳಲಾರದೆ ಸುಮ್ಮನೆ ಇರುತ್ತ ಬಂದಿರುವಳು. ಆ ಗುಪ್ತ ಸಂಗತಿಯನ್ನು ಆಕೆಯ ಮುಖದಿಂದ ಕೇಳಿದರೆ ನಿಮಗೆ ಬಹಳ ಆನಂದವಾದೀತು ; ಆದ್ದರಿಂದ ತಾವು ವಿಜಯನಗರಕ್ಕೆ ಇಷ್ಟು ಅವಸರ ಮಾಡದೆ, ಬೆಳಗಾಗುವತನಕ ಮೆಹರ್ಜಾನಳ ಬಳಿಯಲ್ಲಿದ್ದು, ಸ್ವಲ್ಪ ವಿಶ್ರಮಿಸಿರಿ ಆಮೇಲೆ ಆಕೆಯ ಅನುಮತಿಯಿಂದ ಬೇಕಾದಲ್ಲಿಗೆ ಹೋಗಬಹುದು, ಎಂದು ಹೇಳಿದಳೂ. ಇತ್ತ ರಾಮರಾಜನು ತನ್ನೊಡನೆ ಸರಳತನದಿಂದ ನಡಕೊಳ್ಳದೆ ತನ್ನನ್ನು ಮೋಸಗೊಳಿಸುವನೆಂಬುದು ಪ್ರೇಮದ ಮೂರ್ತಿಯಾದ ಮೆಹರ್ಜಾನಳಿಗೆ ಅಷ್ಟು ಸ್ಪಷ್ಟವಾಗಿ ಗೊತ್ತಾಗದಿದ್ದರೂ, ಮಾರ್ಜೀನೆಯು ತನ್ನ ತೀಕ್ಷ್ಣ ಬುದ್ದಿಯ ಯೋಗದಿಂದ ಅದನ್ನು ಸಷ್ಟವಾಗಿ ಆರಿತುಕೊಂಡಿದ್ದಳು ; ಆದ್ದರಿಂದಲೇ ಆಕೆಯು ಹೀಗೆ ಸ್ಪಷ್ಟವಾಗಿ ಮಾತಾಡಿದಳು!

ರಾಮರಾಜನು ಮಾರ್ಜೀನೆಯ ಮಾತುಗಳನ್ನು ಕೇಳಿ ಸ್ವಲ್ಪ ಹೊತ್ತು ಸುಮ್ಮನಿದ್ದು ಆಮೇಲೆ ಆಕೆಯನ್ನು ಕುರಿತು-ಮಾರ್ಜೀನೇ, ನೀನು ವಿಲಕ್ಷಣ ಮನುಷ್ಯಳು ಕಾಣುತ್ತೀ, ನನಗೆ ಮೆಹರ್ಜಾನಳು ಹೊರಗಿನವಳೇ ? ಪತಿ ಪತ್ನಿಯರ ಸಂಬಂಧವು ಬಿಡುವಹಾಗಿದೆಯೇ ? ಅಂದ ಬಳಿಕ ನಾನು ಮೆಹರ್ಜಾನಳನ್ನು ಮೋಸಗೊಳಿಸಿದರೆ, ಅಥವಾ ಮೆಹೆರ್ಜಾನಳು ನನ್ನನ್ನು ಮೋಸಗೊಳಿಸಿದರೆ, ವಿಕಲ್ಪವನ್ನೆಣಿಸಬಹುದೇ ? ಅತಿ ವಾತ್ಸಲ್ಯದ ಮೂಲಕ ಮೆಹರ್ಜಾನಳ ಮಾತನ್ನು ಮೀರುವದು ನನ್ನಿಂದಾಗುವದಿಲ್ಲ. ಕೆಲಸವು ಬಹು ಸೂಕ್ಷ್ಮವಿರುವದರಿಂದ ಮೆಹರ್ಜಾನಳಿಗೆ ಹೇಳದೆ ನಾನು ಈಗ ವಿಜಯನಗರಕ್ಕೆ ಹೊರಟಿರುವೆನು. ಅದಿರಲಿ, ನೀನು ಈ ಗುಪ್ತವಾದ ಸಂಗತಿಯೆಂದು ಹೇಳದೆಯಲ್ಲ,