ಪುಟ:Kannadigara Karma Kathe.pdf/೬೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೪೬
ಕನ್ನಡಿಗರ ಕರ್ಮಕಥೆ
 

ಮಹತ್ವಾಕಾಂಕ್ಷೆಯಿಂದ ಮೆಹರ್ಜಾನಳನ್ನು ಇಷ್ಟು ದಿನ ಲಗ್ನಮಾಡದೆ ಹಾಗೆ ಬಿಟ್ಟಿದ್ದನು. ಈ ಮಹತ್ವಾಕಂಕ್ಷೆಯ ಪರಿಣಾಮವು ಅನರ್ಥಕ್ಕೆ ಹ್ಯಾಗೆ ಕಾರಣವಾಯಿತೆಂಬದನ್ನು ವಾಚಕರಿಗೆ ಈಗ ಬರೆದು ತಿಳಿಸುವ ಕಾರಣವಿಲ್ಲ. ರಾಮರಾಜನು ಬೇಟೆಯಾಡಲಿಕ್ಕೆ ಹೋದಾಗ ಮೆಹರ್ಜಾನಳನ್ನು ಅಪಹರಿಸಿದ ಸಂಗತಿಯು ಅವರಿಗೆ ಈ ಮೊದಲೇ ಗೊತ್ತಾಗಿರುತ್ತದೆ. ಹೀಗೆ ಮಾರ್ಜೀನೆಯು ಮೆಹರ್ಜಾನಳ ಸ್ವಭಾವವನ್ನು ಪೂರಾ ಬಲ್ಲವಳಾದ್ದರಿಂದಲೇ ಆ ಸರದಾರ ಕುವರಿಯು ಸಂತಾಪ ಗೊಂಡಿರಲು, ಆಕೆಯ ವಿರುದ್ದ ಮಾತಾಡುವ ಗೊಡವೆಗೆ ಆ ಜಾಣೆಯು ಹೋಗಲಿಲ್ಲ. ನಿನಗೆ ಇಷ್ಟು ಸಿಟ್ಟು ಯಾಕೆ ಬಂದಿತು ? ಪತ್ರದಲ್ಲಿ ಅಂಥ ಸಂಗತಿಯನ್ನೇನು ಬರೆದಿದೆ ? ಎಂದು ಕೇಳುವ ಉಸಾಬರಿಗೂ ಆಕೆಯು ಹೋಗಲಿಲ್ಲ. ಈಗ ಮೆಹರ್ಜಾನಳ ಮಾತಿಗೆ ಒಡಂಬಡುತ್ತ ಹೋಗಿ ಆಕೆಯು ಸ್ವಲ್ಪ ಶಾಂತಳಾದ ಮೇಲೆ ಹೇಳೂಕೇಳುವದನ್ನು ಮಾಡೋಣವೆಂದು ತಿಳಿದು, ಆ ದೂರದರ್ಶಿಯಾದ ಹೆಣ್ಣುಮಗಳು ಮೆಹರ್ಜಾನಳನ್ನು ಕುರಿತು-ಮೆಹರ್ಜಾನ, ನಿನ್ನ ಮಾತಿಗೆ ನಾನು ಹೊರಗಾದವಳೇ ? ನಿಶ್ಚಯವಾಗಿ ನಿನ್ನ ಸಂಗಡ ಬರುವೆನು, ನೀನಿದ್ದಲ್ಲಿ ನಾನು, ಎಂದು ಹೇಳಿದಳು.

ಮಾರ್ಜೀನೆಯು ಹೀಗೆ ಒಡಂಬಟ್ಟದ್ದರಿಂದ ಮೆಹೆರ್ಜಾನಳಿಗೆ ಸ್ವಲ್ಪ ಸಮಾಧಾನವಾಯಿತು. ಆದರೆ ಆಕೆಯ ನಿಶ್ಚಯವು ಮಾತ್ರ ಸ್ವಲ್ಪವೂ ಕಡಿಮೆಯಾಗಿದ್ದಿಲ್ಲ. ಆಕೆಯು ಮಾರ್ಜೀನೆಯನ್ನು ಕುರಿತು-ಮಾರ್ಜೀನೆ. ಹಿಂದುವಾದ ರಾಮರಾಜರನ್ನು ನಂಬಿ, ಅವಸರದಿಂದ ಲಗ್ನವಾಗಬೇಡೆಂದು ನೀನು ನನಗೆ ಹೇಳಿದ್ದರ ಅನುಭವವು ಈಗ ಬಂದಂತಾಯಿತು. ರಾಮರಾಜನ ಕೃತಘ್ನತೆಗೆ ಮೇರೆಯಿಲ್ಲದಾಯಿತು. ಮಾರ್ಜೀನೆ, ಈ ಪತ್ರದೊಳಗಿನ ಸಂಗತಿಯನ್ನು ನೆನಸಿದ ಕೂಡಲೆ ನನ್ನ ಸಂತಾಪವು ಹೆಚ್ಚಿ, ಮೈಮೇಲಿನ ಎಚ್ಚರವು ತಪ್ಪುತ್ತದೆ. ರಾಮರಾಜರು ವಿಜಯನಗರದ ಮಂತ್ರಿಪದವನ್ನು ಹೊಂದುವದಕ್ಕಾಗಿ ಕೃಷ್ಣದೇವರಾಜನ ಮಗಳನ್ನು ಲಗ್ನವಾಗುವರಂತೆ ! ಅಂದಬಳಿಕ ಪಟ್ಟ ರಾಣಿಯ ಮಾನವು ನನ್ನ ಪಾಲಿಗೆ ಎಲ್ಲಿ ಉಳಿಯಿತು ? ಯವನಳಾದ ನನ್ನ ಪಾಣಿಗ್ರಹಣ ಮಾಡಿದ್ದರಿಂದ ರಾಮರಾಜನ ಉತ್ಕರ್ಷಕ್ಕೆ ತೊಂದರೆಯಾಗಿದೆಯಂತೆ ! ತಮ್ಮ ವಿವಾಹವಾಗುವವರೆಗೆ ನಾನು ಏಕಾಂತವಾಗಿ ಇರಬೇಕಂತೆ ! ಅಲ್ಲಿಯವರೆಗೆ ತಾವು ಕುಂಜವನಕ್ಕೆ ಬಾರದಿದ್ದರೂ ನಾನು ವಿಕಲ್ಪವನ್ನು ಎಣಿಸಬಾರದಂತೆ ! ಸರಿ ಸರಿ ! ಮಾರ್ಜೀನೆ, ಕಾಫರನಾದ ಈ ಹಿಂದುವಿನ ಕೃತಘ್ನತೆಯು ಆಗ ನನಗೆ ತಿಳಿಯಲಿಲ್ಲ. ನಿನ್ನ ಮಾತುಗಳನ್ನು ಮೀರಿ ನಾನು ರಾಮರಾಜನ ಕೈಹಿಡಿದದ್ದು ಮಹಾಪರಾಧವಾಯಿತು. ಈ