ಪುಟ:Kannadigara Karma Kathe.pdf/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೮

ಕನ್ನಡಿಗರ ಕರ್ಮಕಥೆ

ಮಾರ್ಜೀನೆಯ ಈ ಮಾತುಗಳನ್ನು ಕೇಳಿ ಮೆಹರ್ಜಾನಳಿಗೆ ಸ್ವಲ್ಪ ಸಮಾಧಾನವಾಯಿತು ; ಆದರೆ ತಾನು ಗರ್ಭಿಣಿಯಿದ್ದೇನೆಂಬ ಸುದ್ದಿಯನ್ನು ಕೇಳಿ ರಾಮರಾಜನು ತನ್ನನ್ನು ಭೆಟ್ಟಿಯಾಗದೆ ಹಾಗೆ ಹೋದದ್ದನ್ನೂ, ಪತ್ರದಲ್ಲಿ ತನ್ನ ಸಲುವಾಗಿ ತೋರಿಸಿದ ಅನಾದರವನ್ನೂ ಸ್ಮರಿಸಿ, ಪುನಃ ಆಕೆಯು ಸಂತಾಪಗೊಂಡು ಮಾರ್ಜೀನೆಯನ್ನು ಕುರಿತು ಮಾರ್ಜೀನೆ, ನೀನು ಹೇಳುವದೆಲ್ಲ ನಿಜವು ; ಆದರ ಅಪಮಾನಕ್ಕಿಂತ ಮರಣವೇ ಶ್ರೇಯಸ್ಕರವೆಂದು ತಿಳಿಯುವ ಅಭಿಮಾನಿಗಳಿಗೆ ; ನಿನ್ನ ಬೋಧದಿಂದ ಏನು ಪ್ರಯೋಜನವಾಗುವದು ಹೇಳು? ಈಗ ಒಂದು ತಾಸಿನ ಹಿಂದಿದ್ದ ಮೆಹರ್ಜಾನಳು ಈಗ ಇರುತ್ತಾಳೆಂದು ತಿಳಿಯಬೇಡ. ಆಗ ಆಕೆಯು ಹಿಂದುವಿದ್ದಳು. ಈಗ ಆಕೆಯು ಸುಟ್ಟು ಬೂದಿಯಾಗಿ ಹೋದಳು. ಈಗಿನ ಮೆಹರ್ಜಾನಳು ಮುಸಲ್ಮಾನಳಿರುತ್ತಾಳೆ. ಆಕೆಯು ತನ್ನ ಜಾತಿಗಳಾದ ಮುಸಲ್ಮಾನರಂತೆ ರಾಮರಾಜನ ಸಂಗಡ ದ್ವೇಷ ಮಾಡುವವಳೇ ಸರಿ, ಆಕೆಯು ತಾನು ಬದುಕುವವರೆಗೆ ರಾಮರಾಜನ ಸೇಡು ತೀರಿಸಿಕೊಳ್ಳಲಿಕ್ಕೆ ಯತ್ನಿಸುವವಳೇ ಸರಿ. ಮೆಹರ್ಜಾನಳು. ತನ್ನ ತನುಮನಧನಗಳನ್ನು ರಾಮರಾಜನಿಗೆ ನಿರ್ವಂಚನೆಯಿಂದ ಒಪ್ಪಿಸಿದ್ದಳು ; ಆದರೆ ಆತನು ಈಗ ಅವನ್ನು ನಿರಾಕರಿಸಿ ಚಲ್ಲಿಕೂಡುವುದರಿಂದ ಅವು ಕೊಳೆತು ವಿಕಾರವನ್ನು ಹೊಂದಿ, ರಾಮರಾಜನಿಗೆ ಬಾಧಕವಾದರೆ ಯಾರೇನು ಮಾಡಬೇಕು ? ಮಾರ್ಜೀನೆ, ಬಹಳ ಮಾತುಗಳಿಂದೇನು ? ಖಾನ್‌ಜಮಾನ್ ಮಹಬೂಬಖಾನನ ಮಗಳಾದ ಈ ಮೆಹರ್ಜಾನಳಿಗೆ ಅಪಮಾನವು ಸಹನವಾಗದು. ಆಕೆಯು ಇಂದಿನಿಂದ ಎಲ್ಲ ಆಸೆಗಳನ್ನು ತೊರೆದಿರುವಳು. ರಾಮರಾಜನ ಸೇಡು ತೀರಿಸಿಕೊಳ್ಳುವದೊಂದು ಆಸೆಯು ಮಾತ್ರ ಆಕೆಗಿರುತ್ತದೆ. ರಾಮರಾಜನ ಹಂಗು ನನಗೆ ಇನ್ನು ಬೇಡ. ಆತನದೊಂದು ರಿಂಬಿಯನ್ನಾದರೂ ನಾನು ಮುಟ್ಟುವದಿಲ್ಲ. ಆತನ ವಸ್ತ್ರಗಳು ಬೇಡ ; ದುಡ್ಡು ಬೇಡ, ಧೂಪ ಬೇಡ, ನಡೆ. ಇಲ್ಲಿಂದ ಹೊರಟು ಎಲ್ಲಿಗಾದರೂ ಹೋಗೋಣ. ನನ್ನ ತಂದೆ ಕೊಟ್ಟಿರುವ ಕೆಲವು ಆಭರಣಗಳು ನಮ್ಮ ಬಳಿಯಲ್ಲಿರುವವಷ್ಟೆ ? ಅವನ್ನು ಮುರಿಸಿ ಹ್ಯಾಗಾದರೂ ಕಾಲಹರಣ ಮಾಡೋಣ. ರಾಮರಾಜನು ಈಗ ನನ್ನ ಉದರದಲ್ಲಿ ಬಿತ್ತಿರುವ ವಿಷದ ಬೀಜವು ದೊಡ್ಡ ವೃಕ್ಷವಾಗಿ, ಅದರ ಫಲಗಳ ಸೇವನದಿಂದ ಆ ರಾಮರಾಜನು ಸಮೂಲ ನಾಶಹೊಂದುವ ಹಾದಿಯನ್ನು ನೋಡೋಣ. ಇದರ ಮೇಲೆಯೂ ನೀನು ವ್ಯರ್ಥವಾಗಿ ನನ್ನನ್ನು ಬೋಧಿಸಿ ಕಾಲಹರಣ ಮಾಡಿದರೆ, ನನ್ನ ಜೀವವು ನನ್ನ ಕೈಯೊಳಗಿರುತ್ತದೆ, ಆಮೇಲೆ ನಿನ್ನ ಹಂಗಾದರೂ ಏನು ? ಮೆಹರ್ಜಾನಳ