ನಿಶ್ಚಯದಲ್ಲಿ ಇನ್ನು ಅಂತರವಾಗಲಾರದು. ನಿನ್ನ ಹಳೆಯ ಬಟ್ಟೆಬರೆಗಳನ್ನೂ, ಬುರುಕೆಯನ್ನೂ ನನಗೆ ಕೊಡು. ಅವನ್ನು ಹಾಕಿಕೊಂಡು ಇಲ್ಲಿಂದ ಹ್ಯಾಗಾದರೂ ಮಾಡಿ ಪಾರಾಗಿ ಹೋಗೋಣ ; ಹ್ಯಾಗೂ ನನ್ನ ಸುಖವು ಮಣ್ಣುಗೂಡಿ ಹೋಯಿತು. ಇನ್ನು ಮೇಲೆ ದುಷ್ಪ ಹಿಂದುಗಳಿಂದ ನನ್ನಂಥ ಯವನ ತರುಣಿಯರ ಸುಖವು ಮಣ್ಣುಗೂಡದಂತೆ ಯತ್ನಿಸುವಾಗ ನನ್ನ ದೇಹವೂ ಮಣ್ಣಾದರೆ, ಒಂದು ಬಗೆಯ ಪರೋಪಕಾರವಾದರೂ ಘಟಿಸಿದಂತಾಗುವವು.
ಮಾರ್ಜೀನೆಗಾದರೂ ಮೆಹರ್ಜಾನಳ ಮಾತು ತೀರ ಅಯೋಗ್ಯವಾಗಿ ತೋರಲಿಲ್ಲ. ರಾಮರಾಜನು ತನ್ನ ಯೋಗ್ಯಬೋಧಕ್ಕೆ ಕಿವಿಗೊಡದೆ ವಿಷಯಲಂಪಟನಾಗಿ ಸಿಕ್ಕಹಾಗೆ ವಚನಕೊಟ್ಟು, ಲಗ್ನವಾಗಿ ಈಗ ಮೆಹರ್ಜಾನಳನ್ನು ಉದಾಸೀನ ಮಾಡಿದ್ದಕ್ಕಾಗಿ ಮಾರ್ಜೀನೆಗೂ ಸಂತಾಪವಾಗಿತ್ತು. ಅಯೋಗ್ಯ ನಡತೆಗಾಗಿ ಸರಳ ಮನಸ್ಸಿನವರಿಗಾಗುವ ಸಂತಾಪ ಬರವು ಕುಹಕರಿಗೆ ಗೊತ್ತಾಗದು. ಮೆಹರ್ಜಾನಳು ಸಂಸಾರ ಕೇಡಾಗ ಬಾರದೆಂದು ಮಾರ್ಜೀನೆಯು ಮೊದಮೊದಲು ಸೌಮ್ಯ ಮಾರ್ಗವನ್ನು ಹಿಡಿಯುವದಕ್ಕಾಗಿ ಆಕೆಯನ್ನು ಬೋಧಿಸಿದಳು ; ಆದರೆ ಮಹಾ ಅಭಿಮಾನಿಯಾದ ಮೆಹರ್ಜಾನಳು ತನ್ನ ಸುಖಸರ್ವಸ್ವದ ಮೇಲೆ ಪ್ರತಿಜ್ಞೆಯ ಭಾಷೆಯಿಂದ ಎಳ್ಳು ನೀರು ಬಿಟ್ಟದ್ದನ್ನು ನೋಡಿ ಗತ್ಯಂತರ ಕಾಣದೆ, ಮಾರ್ಜೀನೆಯೂ ಸ್ವಕುಲಾಭಿಮಾನವನ್ನು ತಾಳಿದಳು. ಹಿಂದೂ ಜನರಿಂದ ಮುಸಲ್ಮಾನರಿಗಾಗುತ್ತಿದ್ದ ತ್ರಾಸವನ್ನು ನೆನೆಸಲು ರಾಮರಾಜನಂಥ ಅಯೋಗ್ಯ ಹಿಂದುಗಳ ಶಾಸನವಾಗುವದು ಅನ್ಯಾಯವಲ್ಲೆಂಬ ಭಾವನೆಯು ಆಕೆಯಲ್ಲಿ ಉತ್ಪನ್ನವಾಯಿತು. ಆದರೂ ಆಕೆಯು ಮೆಹರ್ಜಾನಳನ್ನು ಕುರಿತು-ಮೆಹರ್, ನಿನ್ನ ಮಾತು ಅಯೋಗ್ಯವೆಂದು ನಾನು ಹೇಳುವುದಿಲ್ಲ, ಆದರೆ ದಂಪತಿಗಳೆನಿಸಿಕೊಳ್ಳುವವರಿಗೆ ಈ ನಡತೆಯು ಒಪ್ಪದು. ಅವರು ಪರಸ್ಪರರ ಅಪರಾಧಗಳನ್ನು ಕ್ಷಮಿಸಿ ಪ್ರೇಮಕ್ಕೆ ಭಂಗಬಾರದಂತೆ ನಡೆದುಕೊಳ್ಳುವದೇ ಯೋಗ್ಯವು, ನಿನ್ನ ಈಗಿನ ಪ್ರತಿಜ್ಞೆಯ ಪರಿಣಾಮವು ಯಾರಿಗೂ ಸುಖಪ್ರದವಾಗುವದಿಲ್ಲ. ಹೀಗಿದ್ದು ರಾಮರಾಜನನ್ನು ನೀನು ಶತ್ರುವೆಂದು ತಿಳಿದು ಆತನ ಸೇಡು ತೀರಿಸಿಕೊಳ್ಳುವದಕ್ಕಾಗಿ “ಪ್ರತಿಜ್ಞೆ ಮಾಡುತ್ತೀ ! ನಿನ್ನ ಪ್ರತಿಜ್ಞೆಯು ಅಯೋಗ್ಯವಾದರೂ ನಿನ್ನ ಮೇಲಿನ ಪ್ರೇಮಾತಿಶಯದಿಂದ ನಾನು ನಿನ್ನನ್ನು ಅನುಸರಿಸಬೇಕಾಗುತ್ತದೆ. ಇದು ದಂಪತಿಗಳ, ವಿಶೇಷವಾಗಿ ಅರ್ಧಾಂಗಿಯೆನಿಸುವವಳ ಧರ್ಮವಲ್ಲೆಂದು ನಾನು ನಿನಗೆ ಸ್ಪಷ್ಟವಾಗಿ ಕಡೆಯ ಸಾರೆ ಹೇಳುತ್ತೇನೆ. ರಾಮರಾಜನ ವಚನಭ್ರಷ್ಟತೆಗಾಗಿ ನನಗೂ ಸಂತಾಪವಾಗಿದೆ.