ಪುಟ:Kannadigara Karma Kathe.pdf/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರಾಮರಾಜನ ಪಶ್ಚಾತ್ತಾಪ

೪೫

ಸಂಶಯದ ಮುದ್ರೆಯಿಂದ ಒಮ್ಮೆ ಎಲ್ಲ ಕಡೆಗೆ ನೋಡಿದನು. ಆಗ ರಾಮರಾಜನು ಆತನನ್ನು ಕುರಿತು-ಹೂಂ, ಮಾತಾಡು; ಇತ್ತ ನಿನ್ನ ಮಾತು ಯಾರಿಗೂ ಕೇಳಿಸುವ ಹಾಗಿಲ್ಲ. ಸುಮ್ಮನೆ ಅತ್ತಿತ್ತ ನೋಡಿ ಹೊತ್ತುಗಳೆಯಬೇಡ, ಅನ್ನಲು ಕನ್ನಡಿಗನಾದ ಧನಮಲ್ಲನು ರಾಮರಾಜನಿಗೆ ಕನ್ನಡ ಮಾತುಗಳಿಂದ-ಮಹಾರಾಜ, ಪಾರಿವಾಳಗಳು ಹಾರಿಹೋದವು ; ಅವು ನನ್ನನ್ನು ಮೋಸಗೊಳಿಸಿದವು, ಎಂದು ಹೇಳಿದನು-ತಿಳಿಗೇಡಿಯೇ ಏನು ಬೊಗಳುವೆ ? ಮೂಕನ ಸೋಗಿನಿಂದ ನಿನ್ನನ್ನು ಅವರ ಬಳಿಯಲ್ಲಿದ್ದು ಇವರ ಸಲುವಾಗಿಯೇ ಏನು ? ಪಾರಿವಾಳಗಳೂ ಹಾರಿ ಹೋದವಂತೆ, ಮೋಸ ಮಾಡಿದವಂತೆ ! ಮೂರ್ಖಾ, ನೀನೇನು ಕತ್ತೆಯನ್ನು ಕಾಯುತ್ತಿದ್ದೆ? ಅವರನ್ನು ಯಾಕೆ ಹೋಗಗೊಟ್ಟೆ ? ಬೊಗಳು, ಎನಾಯಿತೆಂಬುದನ್ನು ಬೇಗನೆ ಬೊಗಳು” ಎಂದು ರೇಗಿ ಕೇಳಲು, ಧನಮಲ್ಲನು-ನೀವು ಸಮಾಧಾನದಿಂದ ಕೇಳಿಕೊಂಡರೆ ಎಲ್ಲ ಸುದ್ದಿಯನ್ನು ಹೇಳುತ್ತೇನೆ. ಎಲ್ಲವನ್ನು ಕೇಳಿದ ಬಳಿಕ ಅದರಲ್ಲಿ ನನ್ನ ಅಪರಾಧವೇನೂ ಇಲ್ಲೆಂದು ನಿಮಗೆ ಕಾಣಬಹುದು. ಸುದ್ದಿಯನ್ನು ಕೇಳಿಕೊಳ್ಳದೆ ಸುಮ್ಮನೆ ಹೆಸರಿಡುವದಾಗಿದ್ದರೆ, ಅಲ್ಲಿ ಮೂಕನಾಗಿದ್ದಂತೆ ಇಲ್ಲಿಯೂ ನಾನು ಮೂಕನೆಂತಲೇ ತಿಳಿಯಿರಿ !

ಧನಮಲ್ಲನ ಈ ಎಟ್ಟಿ ಮಾತುಗಳನ್ನು ಕೇಳಿ, ರಾಮರಾಜನು ತನ್ನ ಸಿಟ್ಟನ್ನು ನುಂಗಿಕೊಳ್ಳಬೇಕಾಯಿತು ; ಯಾಕೆಂದರೆ, ಧನಮಲ್ಲನು ವಿಲಕ್ಷಣ ಮನುಷ್ಯನೆಂಬುದು ರಾಮರಾಜನಿಗೆ ಗೊತ್ತಿತ್ತು: ಆದ್ದರಿಂದ ಆತನು ಸಮಾಧಾನದಿಂದ ಧನಮಲ್ಲನನ್ನು ಕುರಿತು-ಹೂ, ಮಾತಾಡು. ಮಾತಾಡು, ಏನು ಹೇಳುವದನ್ನು ಬೇಗನೆ ಹೇಳು, ಅನ್ನಲು, ಧನಮಲ್ಲನು ನಡೆದ ಸಂಗತಿಯನ್ನೆಲ್ಲ ಹೇಳಿದನು. ಆತನಿಲ್ಲದಾಗ ಮೆಹರ್ಜಾನಳೂ, ಮಾರ್ಜೀನೆಯೂ ಆಡಿದ ಮಾತುಗಳು ಅವನಿಗೆ ಗೊತ್ತಿಲ್ಲದ್ದರಂದ ಅವಷ್ಟನ್ನು ಮಾತ್ರ ಹೇಳಲಿಲ್ಲ. ರಾಮರಾಜನು ಧನಮಲ್ಲನ ಎಲ್ಲ ಮಾತುಗಳನ್ನು ಲಕ್ಶ್ಯಪೂರ್ವಕವಾಗಿ ಕೇಳಿ ಕೊಂಡ ಮೇಲೆ, ವಿಚಾರಮಗ್ನನಾಗಿ ಕೆಲಹೊತ್ತಿನ ಮೇಲೆ ಧನಮಲ್ಲನನ್ನು ಕುರಿತು

ರಾಮರಾಜ-ಅವರು ತಮ್ಮ ಸಂಗಡ ಏನೇನು ಸಾಮಾನು ಒಯ್ದಿದ್ದಾರೆ?

ಧನಮಲ್ಲ-ಅವರು ಒಂದು ರಿಂಬಿಯನ್ನೂ ಸಹ ಸಂಗಡ ತಕ್ಕೊಂಡು ಹೋಗಿರುವದಿಲ್ಲ. ಪ್ರತಿ ಒಂದು ಸಾರೆ ದರ್ಗಾಕ್ಕೆ ಹೋಗುವಾಗ ಒಯ್ಯತಿದ್ದ ಸಾಮಾನುಗಳನ್ನು ಸಹ ಈ ಸಾರೆ ಅವರು ಒಯ್ದಿರುವದಿಲ್ಲ. ಅಂದ ಬಳಿಕ ಅವರು ತಿರುಗಿ ಬರಲಿಕ್ಕಿಲ್ಲೆಂಬ ಕಲ್ಪನೆಯಾದರೂ ನನಗೆ ಹ್ಯಾಗಾಗಬೇಕು ?

ರಾಮರಾಜ ದರ್ಗೆಯಲ್ಲಿ ನೀನೇನು ಶೋಧಮಾಡಿದೆ ?