ಧನಮಲ್ಲ-ಮಾಡಲಿಕ್ಕೆ ಶಕ್ಯವಿದ್ದ ಮಟ್ಟಿಗೆ ಎಲ್ಲ ಕಡೆಗೂ ಶೋಧ ಮಾಡಿದೆನು. ಇನ್ನು ಹೀಗೆ ಸುಮ್ಮನೆ ಶೋಧ ಮಾಡುತ್ತ ಕಾಲಹರಣ ಮಾಡುವದಕ್ಕಿಂತ ಸನ್ನಿಧಿಯಲ್ಲಿ ಎಲ್ಲ ಸಂಗತಿಗಳನ್ನು ಹೇಳಿ ಮುಂದಿನ ಹಾದಿಯನ್ನು ಕಂಡುಕೊಳ್ಳುವುದು ಯೋಗ್ಯವೆಂದು ತೋರಿದ್ದರಿಂದ, ತಮ್ಮ ಬಳಿಗೆ ಬಂದೆನು.
ಧನಮಲ್ಲನ ಈ ಉತ್ತರದ ಕಡೆಗೆ ರಾಮರಾಜ ಲಕ್ಷ್ಯವಿದ್ದಂತೆ ತೋರಲಿಲ್ಲ. ಆತನ ಮನಸ್ಸಿನಲ್ಲಿ ಹಲವು ವಿಚಾರಗಳು ಉತ್ಪನ್ನವಾಗಿ ಮನಸ್ಸನ್ನು ಚಂಚಲವಾಗಿ ಮಾಡಿದ್ದವು. ಸ್ವಲ್ಪ ಹೊತ್ತಿನ ಮೇಲೆ ಆತನು ಧನಮಲ್ಲನಿಗೆ-ಈಗ ನೀನು ಹೋಗು, ಸಂಜೆಯವರೆಗೆ ವಿಶ್ರಮಿಸು, ಸಂಜೆಯಮುಂದೆ ನಾನು ನಿನ್ನನ್ನು ಕರೆಸುವೆನು. ಏನು ಮಾಡಬೇಕೆಂಬುದರ ವಿಚಾರವು ಮುಂದೆ, ಈಗ ಬೇಡ, ಹೂ ನಡೆ, ಈಗ ನೀನು ನನ್ನ ಎದುರಿಗೆ ಸಹ ನಿಲ್ಲಬೇಡ, ಎಂದು ಹೇಳಿ, ಧನಮಲ್ಲನ ಕಡೆಗೆ ಬೆನ್ನು ಮಾಡಿ ಕುಳಿತುಕೊಂಡನು. ಧನಮಲ್ಲನಿಗಾದರೂ ಇಷ್ಟೇ ಬೇಕಾಗಿತ್ತು. ಬೆಳತನಕ ನಿದ್ದೆಗೆಟ್ಟು ದಣಿದಿದ್ದರಿಂದ ಯಾವಾಗ ನೆಲವನ್ನು ಕಂಡೇನೆಂಬ ಹಾಗೆ ಆತನಿಗೆ ಆಗಿತ್ತು, ಕೂಡಲೇ ಆತನು ಅಲ್ಲಿಂದ ಹೊರಟುಹೋದನು. ಇತ್ತ ರಾಮರಾಜನು ನಡೆದ ಸಂಗತಿಯನ್ನು ಕುರಿತು ಬಗೆಬಗೆಯಾಗಿ ಆಲೋಚಿಸುತ್ತ ಕುಳಿತುಕೊಂಡನು. ಮೆಹರ್ಜಾನಳು ತಾನಾಗಿ ಹೋದದ್ದರಿಂದ ತನ್ನ ಮಂತ್ರಿ ಪದವಿಯ ಪ್ರಾಪ್ತಿಗಾಗಿ ಒದಗಿದ್ದೊಂದು ವಿಘ್ನ ನಿವಾರಣೆ ಆಯಿತೆಂಬಂತೆ ತೋರಿ, ಆತನಿಗೆ ಕೆಲಮಟ್ಟಿಗೆ ಸಮಾಧಾನವಾದಂತೆ ಆಯಿತು. ಹಾಗೆ ಸಮಾಧಾನವಾಗಿರದಿದ್ದರೆ, ಆತನು ಧನಮಲ್ಲನ ವಿಶ್ರಾಂತಿಗೆ ಆಸ್ಪದವನ್ನು ಕೊಡುತ್ತಿದ್ದಿಲ್ಲ, ಮೆಹರ್ಜಾನಳನ್ನು ಹುಡುಕಿಕೊಂಡು ಬಾರದಿದ್ದರೆ ನಿನ್ನನ್ನು ನಿಲ್ಲಿಸಿ ಸುಡಿಸುವೆನೆಂದು ಆತನು ಧನಮಲ್ಲನಿಗೆ ಹೇಳಬಹುದಾಗಿತ್ತು. ಮೆಹೆರ್ಜಾನಳ ಮೇಲಿದ್ದ ರಾಮರಾಜನ ಪ್ರೇಮವನ್ನು ಮನಸ್ಸಿನಲ್ಲಿ ತಂದರೆ, ರಾಮರಾಜನ ಈ ಬೇಸರದ ಕೃತಿಯು ವಿಲಕ್ಷಣವಾಗಿ ತೋರಬಹುದು ; ಆದರೆ ಪ್ರಬಲ ಮಹತ್ವಾಕಾಂಕ್ಷಿಯು ಹೀಗೆ ಪ್ರೇಮ ಭಂಗವನ್ನು ಮಾಡಿದ್ದು ಆಶ್ಚರ್ಯವಲ್ಲ! ಆದರೆ ಸ್ವಲ್ಪ ಹೊತ್ತಿನ ಮೇಲೆ ರಾಮರಾಜನ ಒಂದೊಂದೇ ಪ್ರೇಮದ ಕೃತಿಗಳ ಸ್ಮರಣವಾಗಿ, ಆತನ ಮನಸ್ಸು ಮತ್ತೆ ಅಸ್ವಸ್ಥವಾಯಿತು. ಆತನ ಹಾಸಿಗೆಯ ಮೇಲೆ ಹೋಗಿ ಮಲಗಿಕೊಂಡು ನಿದ್ದೆ ಮಾಡಿ ಸಮಾಧಾನಪಡಬೇಕೆಂದು ಮಾಡಿದನು; ಆದರೆ ಮೆಹರ್ಜಾನಳ ವಿಯೋಗ ದುಃಖವು ಆತನನ್ನು ಬಾಧಿಸಹತ್ತಿದ್ದರಿಂದ ನಿದ್ದೆ ಬರುವದೊತ್ತಟ್ಟಿಗುಳಿದು, ಆತನ ಕಣ್ಣೋಳಗಿಂದ ನೀರುಗಳು ಸುರಿಯಹತ್ತಿದವು. ಆತನು ಮೊದಮೊದಲು ಕಣ್ಣೀರುಗಳನ್ನು