ಪುಟ:Kannadigara Karma Kathe.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮನಸ್ಸಿನ ತಳಮಳಿಕೆ

೬೩

ಕೇಳಲು, ರಾಮರಾಜನು ಇಲ್ಲದ ಉತ್ಸಾಹವನ್ನು ಮುಂದೆ ಮಾಡಿ ಅಣ್ಣನ ಸಂಗಡ ಮಾತಾಡಹತ್ತಿದನು. ಆತನು ಅಣ್ಣನ ಮಾತುಗಳಿಗೆ ತಟ್ಟನೆ ಉತ್ತರ ಕೊಡಲಾರದವನಾದನು. ತಾನು ಹೋಗುವಾಗ ಅಣ್ಣನ ಮುಂದೆ ಏನು ಹೇಳಿದ್ದೇನೆಂಬುದನ್ನು ಸಹ ಅತನು ಮರೆತುಬಿಟ್ಟಿದ್ದನು. ಸ್ವಲ್ಪ ಹೊತ್ತು ಆಲೋಚಿಸಿ ಅದು ನೆನಪಿಗೆ ಬಂದಕೂಡಲೆ, ಆತನು ಅಣ್ಣನನ್ನು ಕುರಿತು-ಸಂಗನಪಲ್ಲಿಯಲ್ಲಿ ಮುಸಲ್ಮಾನರ ಸಂಚುಗಳು ನಡೆಯುತ್ತಿರುವದು ನಿಜವು, ವೀರನ ಗೋರಿಯ ದರ್ಶನಕ್ಕೆಂದು ಮೊದಮೊದಲು ನೂರಾರು ಜನರು ಬರುತ್ತಿರುವದು ಹೋಗಿ, ಈಗ ಸಾವಿರಾರು ಜನರು ಕೂಡುತ್ತಿರುವರು. ಹೀಗೆಯೇ ನಾವು ದುರ್ಲಕ್ಷ ಮಾಡಿದರೆ, ಯಾತ್ರೆಯ ನೆವದಿಂದ ಲಕ್ಷಾವಧಿ ಮುಸಲ್ಮಾನರು ಕೂಡಿ ನಮ್ಮ ರಾಜ್ಯದಲ್ಲಿ ನುಗ್ಗಲಿಕ್ಕೆ ಅನುಕೂಲವಾಗ ಬಹುದು, ನನಗೆ ಆ ಗೊರಿಯನ್ನು ಕಿತ್ತಿ ಒಗೆಯುವ ತನಕ ಸಮಾಧಾನವಾಗುವ ಹಾಗಿಲ್ಲ, ಯಾತ್ರೆಯ ನೆವದಿಂದ ಬೇರೆ ಬೇರೆ ಮುಸಲ್ಮಾನ ಬಾದಶಹರ ವಕೀಲರು ಅಲ್ಲಿ ಕೂಡಿ ಒಳಸಂಚುಗಳನ್ನು ನಡಿಸುವರೆಂದು ಕೇಳಿದ್ದೇನೆ, ಅಣ್ಣಾ, ನಾನು ಕೇಳಿದ ಸುದ್ದಿಯಲ್ಲಿ ತಥ್ಯವಿರುತ್ತದೆ. ಮುಸಲ್ಮಾನರು ಎಷ್ಟು ಗುಪ್ತರೀತಿಯಿಂದ ಮಸಲತ್ತುಗಳನ್ನು ಮಾಡಿದರೂ, ನಮ್ಮ ಗುಪ್ತಚಾರರು ಕೂಡಲೆ ಅದನ್ನು ನನಗೆ ಬಂದು ತಿಳಿಸುವರು. ನಮ್ಮ ರಾಜ್ಯಕ್ಕೆ ಏನಾದರೂ ಘಾತದ ಪ್ರಸಂಗವು ಒದಗಿದರೆ, ಅದು ಸಂಗನಪಲ್ಲಿ ಯೊಳಗಿನ ದರ್ಗೆಯ ಯೋಗದಿಂದಲೇ ಒದಗುವದೆಂಬದನ್ನು ಚನ್ನಾಗಿ ಲಕ್ಷ್ಯದಲ್ಲಿಡಿರಿ, ಎಂದು ನುಡಿದು ಸುಮ್ಮನಾದನು.

ರಾಮರಾಜನು ಹೀಗೆ ಬಡಬಡ ಮಾತಾಡಿದ್ದನ್ನು ಕೇಳಿ ತಿರುಮಲ ರಾಯನಿಗೆ ಆಶ್ಚರ್ಯವಾಯಿತು. ತನ್ನ ತಮ್ಮನು ಸಂಗನಪಲ್ಲಿಗೆ ಹೋದ ನಿಜವಾದ ಕಾರಣವು ಗೊತ್ತಾದದ್ದರಿಂದ ಆತನು ಹೀಗೆ ಆಶ್ಚರ್ಯ ಪಟ್ಟದ್ದು ಅಸ್ವಾಭಾವಿಕವಲ್ಲ. ಮುಸಲ್ಮಾನರ ಕಾರಸ್ಥಾನವನ್ನು ನೋಡಿ ಸಂತಾಪಗೊಂಡಿದ್ದರಿಂದ ತನ್ನ ತಮ್ಮನು ಹೀಗೆ ಬಡಬಡ ಮಾತಾಡುವನೆಂದು ತಿಳಿದು ಆತನು ನಡುವೆ ಪ್ರಶ್ನೆಗಳನ್ನು ಮಾಡದೆ, ಇದ್ದದ್ದನ್ನೆಲ್ಲ ತೋಡಿಕೊಳ್ಳಲಿಕ್ಕೆ ತಮ್ಮನಿಗೆ ಆಸ್ಪದ ಕೊಟ್ಟನು. ರಾಮರಾಜನು ಸುಮ್ಮನಾಗಲು, ತಿರುಮಲರಾಯನು ಸ್ವಲ್ಪ ಹೊತ್ತಿನ ಮೇಲೆ ತಮ್ಮನು ಏನೋ ಪ್ರಶ್ನೆ ಮಾಡಬೇಕೆಂದು ಯೋಚಿಸಿ, ಮಾತಾಡತೊಡಗುತ್ತಿರಲು, ರಾಮರಾಜನು-ಅಣ್ಣಾ. ಈಗ ನನಗೆ ಬಹಳ ತ್ರಾಸವಾಗಿದೆ. ಉಳಿದ ಸಂಗತಿಯನ್ನು ನಾಳೆ ಬೆಳಗಾದ ಬಳಿಕ ಹೇಳುವೆನು, ಹೇಳತಕ್ಕ ಸಂಗತಿಗಳು ಬಹಳ ಇರುತ್ತವೆ, ಇದಲ್ಲದೆ, ವಿಶೇಷ ಸಂಗತಿಯನ್ನು ಅರಿತುಕೊಂಡು ಬರುವದಕ್ಕಾಗಿ ಎರಡನೆಯ