ಇಂಥ ಇಂಥ ಹೊಸ ಸುದ್ದಿಗಳು ಹತ್ತಿರುತ್ತವೆ, ಎಂದು ಹೇಳಿ, ತನ್ನ ವರ್ಣನಾಶಕ್ತಿಯ ಪರಮಾವಧಿಯಿಂದ ಮುಸಲ್ಮಾನರ ಒಳಸಂಚಿನ ಕಾಲ್ಪನಿಕ ಸ್ವರೂಪವನ್ನು ಮಹಾರಾಜರ ಕಣ್ಣಮುಂದೆ ಇಟ್ಟನು. ಅದರಿಂದ ಮಹಾರಾಜರ ಮನಸ್ಸಿನಲ್ಲಿ ಇನ್ನು ಮೇಲೆ ಈ ಸಂಬಂಧದಿಂದ ಏನಾದರೂ ವ್ಯವಸ್ಥೆ ಮಾಡಬೇಕೆಂಬ ವಿಚಾರವು ಉತ್ಪನ್ನವಾಯಿತು. ಅವರು ಇದನ್ನೆ ಏನು ಉಪಾಯ ಮಾಡಬೇಕೆಂದು ರಾಮರಾಜನನ್ನು ಕೇಳಿದರು. ಹೀಗೆ ಕೇಳುವದೇ ರಾಮರಾಜನಿಗೆ ಬೇಕಾಗಿತ್ತು. ಮಹಾರಾಜರು ಕೇಳಿದ ಕೂಡಲೇ ರಾಮರಾಜನು ಕೈಜೋಡಿಸಿ, ಅವರನ್ನು ಕುರಿತು-ತಮ್ಮ ಅಪ್ಪಣೆಯಾದರೆ, ನಾನು ಗುಪ್ತವೇಷದಿಂದ ಹೋಗಿ ಯಾವತ್ತು ಗುಪ್ತ ಸಂಗತಿಯನ್ನು ಚಾತುರ್ಯದಿಂದ ತಿಳಿದುಕೊಂಡು ಬರುತ್ತೇನೆ. ಇನ್ನು ಹದಿನೈದು ದಿವಸ ತುಂಗಭದ್ರೆಯ ದಂಡೆಯನ್ನು ಹಿಡಿದು ತಿರುಗುವದು ಅವಶ್ಯವಾಗಿದೆ. ನಾವಾಗಿ ಮೊದಲು ಏನೂ ಮಾಡಬಾರದು. ಎಲ್ಲ ಒಳಸಂಚುಗಳು ಬೈಲಿಗೆ ಬಂದರೆ, ಎಲ್ಲ ವ್ಯವಸ್ಥೆಯು ತಾನೇ ಆಗುತ್ತದೆ, ಎಂದು ಹೇಳಿ, ವಿದ್ಯಾನಗರದಿಂದ ಹತ್ತು ಹದಿನೈದು ದಿವಸ ಹೊರಗೆ ಹೋಗಲಿಕ್ಕೆ ಮಹಾರಾಜದಿಂದ ಅಪ್ಪಣೆಯಯನ್ನು ಪಡೆದನು. ಅಪ್ಪಣೆ ಕೊಡುವಾಗ ಅಳಿಯನಾದ ರಾಮರಾಜನಿಗೆ, ಮಹಾರಾಜರು ಇಲ್ಲದ ಯಾವ ಪ್ರಕಾರದ ಸಾಹಸಕ್ಕೂ ನೀವು ಹೋಗಬೇಡಿರಿ. ಜೀವಕ್ಕೆ ಜೀವ ಕೊಡುವ ಮನುಷ್ಯರನ್ನು ಸಂಗಡ ಕರಕೊಂಡು ಹೋಗಿರಿ. ಮುಖ್ಯ ಮಾತು, ಎಲ್ಲ ರೀತಿಯಿಂದಲೂ ಜೋಕೆ, ಎಂದು ಹೇಳಿದರು. ಹೀಗೆ ಒಪ್ಪಿಗೆ ದೊರೆತ ಕೂಡಲೇ ರಾಮರಾಜನು ಕ್ಷಣವಾದರೂ ವಿಳಂಬಮಾಡದೆ, ವಿದ್ಯಾನಗರದಿಂದ (ವಿಜಯನಗರದಿಂದ) ಹೊರಟು, ನೆಟ್ಟಗೆ ತನ್ನ ಕುಂಜವನದ ಹಾದಿಯನ್ನು ಹಿಡಿದನು.
****