ಪುಟ:Kannadigara Karma Kathe.pdf/೮೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ವಿನಾಶವೃಕ್ಷ
೭೧
 

ಮುಂದೆ ಆ ನಾಲ್ಕು ದಿನಗಳು ಕ್ರಮಿಸಿಹೋಗಹತ್ತಿದವು. ನಾಲ್ಕನೆಯ ದಿನ ರಾತ್ರಿ ಆರು ತಾಸಿನ ಸುಮಾರಕ್ಕೆ ಆತನಿಗೊಂದು ಸ್ವಪ್ನವು ಬಿದ್ದು, ಅದರಲ್ಲಿ ತಾನು ವಿದ್ಯಾನಗರಕ್ಕೆ ಹೊರಟುನಿಂತಂತೆಯೂ, ಮೆಹರ್ಜಾನಳು ದೀನವಾಣಿಯಿಂದ ತನ್ನನ್ನು ಕುರಿತು-ಬೇಡಿರಿ, ದಯಮಾಡಿ ಹೀಗೆ ನನ್ನ ವಿಶ್ವಾಸಘಾತ ಮಾಡಬೇಡಿರಿ” ಎಂದು ಪ್ರಾರ್ಥಿಸಿದಂತೆಯೂ ಆತನಿಗೆ ಆಯಿತು. ಕೂಡಲೆ ರಾಮರಾಜನು ಗಡಬಡಿಸಿ ಎದ್ದು ಕುಳಿತುಕೊಂಡು ನಾಲ್ಕೂ ಕಡೆಗೂ ಕಣ್ಣೆರೆದು ನೋಡಿದನು. ಆತನಿಗೆ ನೋಡಿದಕ್ಕೆಲ್ಲ ಕನಸಿನೊಳಗಿನ ಮೆಹರ್ಜಾನಳೇ ಕಾಣಹತ್ತಿದಳೂ. ಆಗ ರಾಮರಾಜನು-ಛೇ ಛೇ ! ಇನ್ನೆಲ್ಲಿಯ ಮೆಹರ್ಜಾನಳೂ ! ವಿಶ್ವಾಸಘಾತಕನಾದ ನನ್ನ ಮೇಲಿನ ಸಂತಾಪದಿಂದ ಇಲ್ಲಿಯದೊಂದು ರಿಂಬಿಯನ್ನು ಕೂಡ ತಕ್ಕೊಂಡು ಹೋಗದೆಯಿದ್ದ ಹಟಮಾರಿ ಸ್ವಭಾವದ ಆ ಮೆಹರ್ಜಾನಳು ತಿರುಗಿ ಬರಲಾರಳೆಂಬುದು ನನಗೆ ಇನ್ನೂ ತಿಳಿಯಬಾರದೇನು ? ಇನ್ನು ವ್ಯರ್ಥವಾದ ಆಸೆಯಿಂದ ಹೀಗೆಯೇ ಕುಂಜವನದಲ್ಲಿ ಕಾಲವನ್ನು ಕಳೆಯುತ್ತ ಕುಳಿತುಕೊಂಡರೆ, ಕೃಷ್ಣದೇವರಾಯನ ವಿಕಲ್ಪಕ್ಕೆ ಕಾರಣವಾಗಿ ಅಲ್ಲಿಯ ಕೆಲಸವೂ ಕೆಟ್ಟುಹೋದೀತು. ರಾಜಪುತ್ರಿಯಲ್ಲಿ ನನ್ನ ಪೂರ್ಣವಾದ ಅನುರಾಗವು ಇರುತ್ತದೆಂಬ ನಂಬಿಗೆಯು ಮಹಾರಾಜರಿಗೆ ಆಗುವದು ಅವಶ್ಯವಾಗಿರುತ್ತದೆ. ಹೀಗೆ ಮೂರು ಮೂರು ದಿನಕ್ಕೊಮ್ಮೆ ಏನಾದರೂ ನೆವಮಾಡಿ ವಿಜಯನಗರವನ್ನು ಬಿಟ್ಟುಬಂದು, ಹದಿನೈದು ದಿನಗಟ್ಟಲೆ ನಾನು ಹೊರಗೆ ಇರಹತ್ತಿದರೆ, ತರ್ಕವಿತರ್ಕಗಳು ಆರಂಭವಾಗಿ, ನನ್ನ ಹುಳುಕು ಹೊರಬಿದ್ದೀತು ; ಆದ್ದರಿಂದ ನಾಳೆ ಬೆಳಗಾದ ಕೂಡಲೆ ವಿಜಯನಗರಕ್ಕೆ ಹೋಗಬೇಕು, ಎಂದು ನಿಶ್ಚಯಿಸಿದನು. ಕೃಷ್ಣದೇವರಾಯನು ತಮ್ಮ ಮಗಳನ್ನು ತಮ್ಮ ಸಮಾನಸ್ಕಂದರಾದ ಉತ್ತರ ಹಿಂದುಸ್ತಾನದ ಯಾವನೊಬ್ಬ ರಾಜಪುತ್ರನಿಗೆ ಕೊಡಬಹುದಾಗಿತ್ತು ; ಆದರೆ ಮಗಳು ದೂರ ಹೋಗಬೇಕಾಗುವದರಿಂದ ಆಕೆಯ ಯೋಗಕ್ಷೇಮಕ್ಕೆ ಆಸ್ಪದವು ಉಳಿಯುವದಿಲ್ಲೆಂಬ ಕರ್ನಾಟಕರ ಸ್ವಾಭಾವಿಕವಾದ ಹೆಣ್ಣುಗಳಿಗನುಸರಿಸಿ, ಅವರು ತಮ್ಮ ದರ್ಬಾರದೊಳಗಿನ ಯಾವನೊಬ್ಬ ತರುಣ ಸರದಾರನಿಗೆ ಕೊಡಬೇಕೆಂದು ಯೋಚಿಸಿ ಆರಿಸಿ ರಾಮರಾಜನಿಗೆ ತಮ್ಮ ಮಗಳನ್ನು ಕೊಟ್ಟಿದ್ದರು ! ಅಳಿಯನನ್ನು ಅರಸನ ಯೋಗ್ಯತೆಯವರೆಗೆ ಏರಿಸುವದು ತಮ್ಮ ಕೈಯೊಳಗಿರುತ್ತದೆಂದು ಅವರು ತಿಳಿಕೊಂಡಿದ್ದರು. ಈ ಮಾತು ರಾಮರಾಜನಿಗೂ ಗೊತ್ತಿತ್ತು. ಆದ್ದರಿಂದ ಆತನು ಆತುರ ಪಟ್ಟು ಬೆಳಗಾಗುವ ಹಾದಿಯನ್ನು ನೋಡದೆ ಮೆಹರ್ಜಾನಳ ವಸ್ತ್ರಾಭರಣಗಳ ಪೆಟ್ಟಿಗೆಯನ್ನು ಮುಚ್ಚಿ, ಅದಕ್ಕೆ ಬೀಗಹಾಕಿ ಇಟ್ಟು, ತನ್ನ