ಪುಟ:Kannadigara Karma Kathe.pdf/೯೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
ವಿನಾಶವೃಕ್ಷ
೭೫
 

ಅಜ್ಞಾತವಾಸ ಮಾಡಬೇಕಾಯಿತು. ಈ ಅಜ್ಞಾತವಾಸವು ರಾಮರಾಜನಿಗೆ ದುಃಸಹವಾಯಿತು; ಆದರೂ ಆತನು ಅದನ್ನು ಹ್ಯಾಗಾದರೂ ನೀಗಿದನು. ಆ ಅಜ್ಞಾತವಾಸದ ಕಾಲವನ್ನು ಆತನು ಸಕುಟುಂಬ ಕುಂಜವನದಲ್ಲಿ ವಾಸಮಾಡಿ ಕಳೆದನು. ಕುಂಜವನಕ್ಕೆ ಬಂದಬಳಿಕ ಆತನಿಗೆ ಮೆಹರ್ಜಾನಳ ನೆನಪು ಮೇಲೆ ಮೇಲೆ ಆಗಹತ್ತಿತು ; ಆತನು ಸಕುಟುಂಬ ಅಲ್ಲಿ ವಾಸಮಾಡ ಹತ್ತಿದ್ದರಿಂದ, ಮನುಷ್ಯ ಸ್ವಭಾವಕ್ಕನುಸರಿಸಿ ಬರಬರುತ್ತ ಮೆಹರ್ಜಾನಳ ನೆನಪು ಸಹ ಆತನಿಗೆ ಆಗದಹಾಗಾಯಿತು. ಮೆಹರ್ಜಾನಳ ಈ ನೆನಪಿನ ಜತೆಗೆ ರಾಮರಾಜನ ಮಹತ್ವಾಕಾಂಕ್ಷೆ ಮಾತ್ರ ಅಳಿದುಹೋಗಿದ್ದಿಲ್ಲ. ಆತನು ಅಚ್ಯುತರಾಯನ ಆಳಿಕೆಯಲ್ಲಿಯಾದರೂ ತನ್ನ ಕುದುರೆಯನ್ನು ಮುಂದಕ್ಕೆ ನೂಕಿ, ಅಚ್ಯುತರಾಯನನ್ನು ನಾಮಧಾರಿಯಾದ ಅರಸನನ್ನು ಮಾಡಬೇಕೆಂದು ಯತ್ನಿಸಹತ್ತಿದ್ದನು. ಅಚ್ಯುತರಾಯನ ಕಾಲದಲ್ಲಿ ವಿಜಯನಗರದ ಗೌರವವೂ, ದರ್ಪವೂ ತೀರ ಕಡಿಮೆಯಾದವು. ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರದ ರಾಯರ ಭಯವು ಯಾವತ್ತು ಮುಸಲ್ಮಾನ ಬಾದಶಹರಿಗೆ ಇತ್ತು. ವಿಜಾಪುರದ ಇಸ್ಮಾಯಿಲ್ ಆದಿಲಶಹನು ಕೃಷ್ಣದೇವರಾಯನ ಕೈಯಿಂದ ವಿಜಯನಗರದ ರಾಜ್ಯದ ಕೆಲವು ಭಾಗವನ್ನು ಕಸಕೊಳ್ಳಬೇಕೆಂದು ಒಂದೆರಡು ಸಾರೆ ಪ್ರಯತ್ನ ಮಾಡಿದ್ದನು ; ಆದರೆ ಕೃಷ್ಣದೇವರಾಯನು ಆತನ ಆಟವನ್ನು ನಡೆಯಗೊಡಲಿಲ್ಲ. ಈ ಪ್ರಸಂಗವು ಓದತಕ್ಕದ್ದಾದ್ದರಿಂದ ಅದನ್ನು ವಾಚಕರ ಸಲುವಾಗಿ ಕೊಡುವೆವು.

ಇಸ್ಮಾಯಿಲ್ ಆದಿಲ್‌ಶಹನು ರಾಯಚೂರು, ಮುದ್ದುಗಲ್ಲಗಿರಿ ಎಂಬ ಎರಡು ಸ್ಥಳಗಳನ್ನು ಕೃಷ್ಣದೇವರಾಯನ ಕೈಯೊಳಗಿಂದ ಕಸಕೊಂಡು ಮುಸಲ್ಮಾನರ ಸಾಮರ್ಥ್ಯವು ಯಥಾಸ್ಥಿತವಿದ್ದಂತೆ ಹಿಂದುಗಳಿಗೆ ತೋರಿಸಬೇಕೆಂದು ಮಾಡಿದನು. ಆತನ ಸೈನ್ಯವು ಆ ಸ್ಥಳಗಳ ಕಡೆಗೆ ಸಾಗಿಬರಹತ್ತಿತು. ಅವೆರಡು ಸ್ಥಳಗಳು ಮೊದಲು ಮುಸಲ್ಮಾನರವು. ಅವನ್ನು ವಿಜಯನಗರದ ರಾಯರು ಗೆದ್ದುಕೊಂಡಿದ್ದರು, ಆದಿಲ್‌ಶಹನ ಈ ದಂಡ ಯಾತ್ರೆಯನ್ನು, ಪೂರ್ಣ ಜಾಗರೂಕನಾಗಿದ್ದ ಕೃಷ್ಣದೇವರಾಯನು ಕೇಳಿ ತನ್ನ ಪ್ರಚಂಡ ಸೈನ್ಯವನ್ನು ಸಿದ್ಧಗೊಳಿಸಿದನು, ಕೃಷ್ಣದೇವರಾಯನ ಕಾಲದಲ್ಲಿ ವಿಜಯನಗರದ ಸಾಮ್ರಾಜ್ಯದ ಸಾಮರ್ಥ್ಯವು ಅಧಿಕವಾಗಿತ್ತು. ಅದಿಲಶಹನು ದಂಡು ಸಾಗಿಸಿಕೊಂಡು ಬಂದಬಂದಂತೆ, ಕೃಷ್ಣದೇವರಾಯನೂ ತನ್ನ ಪ್ರಚಂಡ ಸೈನ್ಯವನ್ನು ಅದಕ್ಕೆ ಎದುರಾಗಿ ಸಾಗಿಸಿಕೊಂಡು ನಡೆದನು ಆದಿಲಶಹನು ತೀರ ಸನಿಯಕ್ಕೆ ಬಂದನೆಂಬ ಸುದ್ದಿಯನ್ನು ಕೇಳಿ, ಕೃಷ್ಣದೇವರಾಯನು ಕೃಷ್ಣಯ ಈಚೆಯ ದಂಡೆಯಲ್ಲಿ ತನ್ನ