ಪುಟ:Kannadigara Karma Kathe.pdf/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಸಂಚುಗಳು

೮೧

ಜನರ ಮುಂದೆ ಮಾಡಹತ್ತಿದನು. ಮುಂದೆ ಬರುಬರುತ್ತ ತಿರುಮಲನನ್ನು ಶ್ಲಾಘಿಸಹತ್ತಿ, ಮಣಿಮಲ್ಲನನ್ನು ನಿರಾಕರಿಸಹತ್ತಿದನು. ಮೊದಮೊದಲಿಗೆ ಇದರಿಂದ ಏನೂ ಪ್ರಯೋಜನವಾಗದಿದ್ದರೂ ಬರಬರುತ್ತ ಜನರು ರಾಮರಾಜನ ಮಾತಿಗೆ ಒಪ್ಪಿಕೊಳ್ಳಹತ್ತಿದರು, “ಅಚ್ಯುತರಾಯನೂ ಅಲ್ಲ. ತಿರುಮಲನೂ ಅಲ್ಲ. ಮಣಿಮಲ್ಲನಂಥ ಕ್ಷುದ್ರಮನುಷ್ಯನು ರಾಜ್ಯದ ಸೂತ್ರಗಳನ್ನಲ್ಲಾಡಿಸಿ ದೊಡ್ಡ ದೊಡ್ಡ ಮರ್ಯಾದಸ್ಥರ, ಹಾಗೂ ಶೂರರ ಅಪಮಾನ ಮಾಡುವದು ಯೋಗ್ಯವಾಗಬಹುದೋ,” ಎಂದು ರಾಮರಾಜನು ಜನರನ್ನು ಕೇಳಹತ್ತಿದನು. ರಾಮರಾಜನ ಮಾತು ಬಹುಜನರಿಗೆ ಒಪ್ಪಿಗೆಯಾಗಿ, ಬರಬರುತ್ತ ರಾಮರಾಜನ ಪಕ್ಷವು ಸಮರ್ಥವಾಗ ಹತ್ತಿತ್ತು, ಹೀಗೆ ತನ್ನ ಮನಸ್ಸಿನಂತೆ ಎಲ್ಲ ಅನುಕೂಲತೆಯಾದದ್ದನ್ನು ನೋಡಿ, ರಾಮರಾಜನು ಒಂದು ದಿನ ಬಂಡಾಯವನ್ನು ಹೂಡಿ ತಿರುಮಲರಾಯನನ್ನು ಸೆರೆಹಿಡಿದು, ಆತನನ್ನು ಕಾರಾಗೃಹದಲ್ಲಿಡಬೇಕೆಂದು ಮಾಡಿದನು; ಆದರೆ ಈ ಸಂಗತಿಯು ಗುಪ್ತವಾಗಿ ಉಳಿಯಲಿಲ್ಲ, ತಿರುಮಲನ ಕಿವಿಗೆ ಮುಟ್ಟಿತು. ಆಗ ಆತನು ಗಾಬರಿಯಾಗಿ ಮುಂದೆಗಾಣದೆ ಆಲೋಚಿಸಹತ್ತಿದನು.

ಈ ಹಿಂದಿನ ಪ್ರಕರಣದಲ್ಲಿ ಹೇಳಿದಂತೆ, ವಿಜಯನಗರದ ರಾಯರ ಸೇಡು ತೀರಿಸಿಕೊಳ್ಳಲಿಕ್ಕೆ ಹೊಂಚುಹಾಕಿದ್ದ ವಿಜಾಪುರದ ಇಬ್ರಾಹಿಮ ಆದಿಲ ಶಹನು, ಈಗ ತುಂಗಭದ್ರೆಯ ಆಚೆಯಲ್ಲಿದ್ದ ದರ್ಗೆಯಲ್ಲಿ ತನ್ನ ಸೈನ್ಯದ ತಳ ಊರಿದ್ದನು, ಆತನು ಹೊತ್ತು ನೋಡಿ ವಿಜಯನಗರವನ್ನು ಕೈವಶ ಮಾಡಿಕೊಳ್ಳತಕ್ಕವನಿದ್ದನು. ವಿಜಯನಗರದೊಳಗಿನ ಈ ಅಂತಃಕಲಹದ ಸುದ್ದಿಗಳು ಕ್ಷಣಶಃ ಮುಟ್ಟುವಂತೆ ಆತನು ಗುಪ್ತಚಾರರನ್ನಿಟ್ಟಿದ್ದನು. ಇತ್ತ ಮೊದಲೇ ಗಾಬರಿಯಾಗಿದ್ದ ತಿರುಮಲನಿಗೆ ಹೆಚ್ಚು ಹೆಚ್ಚು ಭಯಂಕರವಾದ ಒಳಸಂಚಿನ ಸುದ್ದಿಗಳೂ ಮುಟ್ಟಹತ್ತಿದವು. ತನ್ನ ಮೇಲೆ ಎಲ್ಲರೂ ತಿರುಗಿಬಿದ್ದು ತನ್ನನ್ನೂ, ಅಚ್ಯುತರಾಯನನ್ನೂ ಇನ್ನೂ ನಾಲ್ಕೆಂಟು ದಿನಗಳಲ್ಲಿ ಹಿಡಿದು ಕೊಲ್ಲುವರೆಂಬ ವರ್ತಮಾನವನ್ನು ಸಹ ಆತನು ಕೇಳಿದನು. ತನ್ನ ಪ್ರಾಣರಕ್ಷಣೆ ಮಾಡಿಕೊಳ್ಳುವದಕ್ಕಾಗಿ ಬೇಕಾದದ್ದನ್ನು ಮಾಡಿಕೊಳ್ಳಲಿಕ್ಕೆ ಆತನು ಸಿದ್ಧನಾದನು. ಆಗ ಮಣಿಮಲ್ಲನು ತಿರಮಲನಿಗೆ ನೀವು ಆದಿಲಶಹನನ್ನು ವಿಜಯನಗರಕ್ಕೆ ಕರೆಸಿಕೊಂಡು, ಆತನ ಸ್ನೇಹವನ್ನು ಸಂಪಾದಿಸಿರಿ; ಅಂದರೆ ಎಲ್ಲ ಅರಿಷ್ಟವು ಹಿಂಗುವದು, ಎಂದು ಹೇಳಿದನು. ವಿವೇಕಭ್ರಷ್ಟನಾದ ತಿರುಮಲನಿಗೆ ಕುದ್ರ ಮಣಿಮಲ್ಲನ ಈ ಅದೂರದರ್ಶಿತನದಲ್ಲಿ ದೋಷಗಳು ತೋರಿಲಿಲ್ಲ. ಹೀಗೆ ಮಾಡಿದರೆ, ಮುಂದೆ ಸುಲ್ತಾನನನ್ನು ತಿರುಗಿ ಕಳಿಸಲಿಕ್ಕೆ ಎಷ್ಟು