ಪುಟ:Khinnate banni nivarisoona.pdf/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ದಿಗಿಲು, ತನ್ನ ಬಗ್ಗೆ ಕೀಳರಿಮೆ, ಮಾನಸಿಕ ಚಡಪಡಿಕೆ ಇತ್ಯಾದಿ ಭಯದ ಲಕ್ಷಣಗಳು ಸೇರಿಕೊಳ್ಳುತ್ತವೆ. ವ್ಯಕ್ತಿಯ ನೆಮ್ಮದಿ ಕದಡುತ್ತದೆ.

ಚಿತ್ತ ಚಂಚಲತೆಯ ಖಿನ್ನತೆ
NEUROTIC DEPRESSION

ನಮ್ಮ ದೇಶದಲ್ಲಿ ಈ ಬಗೆಯ ಖಿನ್ನತೆಯಲ್ಲಿ ಅಸ್ಪಷ್ಟ ಮತ್ತು ಅನೇಕ ದೈಹಿಕ ರೋಗ ಲಕ್ಷಣಗಳಿಂದ ವ್ಯಕ್ತಿ ಬಳಲುತ್ತಾನೆ/ಳೆ. ಸಾಮಾನ್ಯ ವೈದ್ಯರು ಆಸ್ಪತ್ರೆಗೆ ಹೋಗಿ ನನ್ನ ಆರೋಗ್ಯ ಸರಿಯಿಲ್ಲ ಪರೀಕ್ಷೆ ಮಾಡಿ, ಚಿಕಿತ್ಸೆ ನೀಡಿ ಎಂದು ಹೇಳುತ್ತಾರೆ. ಬೇಕಾದ ಬೇಡವಾದ ಎಲ್ಲಾ ದೈಹಿಕ ಪರೀಕ್ಷೆಗಳನ್ನು (ರಕ್ತ, ಮೂತ್ರ, ಎಕ್ಸರೆ, ಇಸಿಜಿ, ಸ್ಕ್ಯಾನಿಂಗ್ ಇತ್ಯಾದಿ) ಮಾಡಿಸಲು ಒತ್ತಾಯಿಸುತ್ತಾರೆ. ಎಲ್ಲಾ ರಿಪೋರ್ಟುಗಳು ನಾರ್ಮಲ್ ಎಂದಾಗ, ವೈದ್ಯರು, ರೋಗಿಗಳು ಮತ್ತು ಮನೆಯವರು ಆಶ್ಚರ್ಯಪಡುತ್ತಾರೆ. ಎಲ್ಲಾ ನಾರ್ಮಲ್ ಇರಬೇಕಾದರೆ ರೋಗಿ ನಾಟಕ ಮಾಡುತ್ತಿದ್ದಾನೆ/ಳೆ ಅಥವಾ ಬೇಕಂತಲೇ ರೋಗವಿದೆಯೆಂದು ಸುಳ್ಳು ಹೇಳುತ್ತಿದ್ದಾನೆ/ಳೆ ಎಂದು ಮನೆಯವರು ಹೇಳುವಂತಾಗುತ್ತದೆ. ಅಥವಾ ರೋಗಿಯ ರೋಗಲಕ್ಷಣಗಳಿಗೆ ಮಾಟ, ಮಂತ್ರ, ಮದ್ದೀಡು, ದುಷ್ಠ ಶಕ್ತಿಗಳ ಉಪಟಳ, ದೈವದ ಶಾಪ ಎಂದು ನಿರ್ಧರಿಸಿ, ದೇವಸ್ಥಾನ, ಮಸೀದಿ, ಚರ್ಚುಗಳು, ಮಂತ್ರವಾದಿಗಳು. ಜೋತಿಷ್ಯರತ್ತ ಹೋಗುತ್ತಾರೆ. ಯೋಗ-ಧ್ಯಾನ, ಪ್ರಾಣಾಯಾಮ, ನ್ಯಾಚುರೋಪತಿ ಇತ್ಯಾದಿ ಪರಾಯ ಚಿಕಿತ್ಸಾ ಪದ್ಧತಿಗಳ ಬಾಗಿಲು ತಟ್ಟುತ್ತಾರೆ. ಶಾರೀರಕ ರೋಗಲಕ್ಷಣಗಳ ಜೊತೆಗೆ ಬೇಸರ, ದುಃಖ, ಅಸಹಾಯಕತೆ, ನಿರಾಸೆ, ನಿರುತ್ಸಾಹ, ಜಿಗುಪ್ಪೆ, ಹಸಿವು, ನೀರಡಿಕೆ, ನಿದ್ದೆ, ಮೈಥುನದ ತೊಂದರೆಗಳಿಂದಲೂ ಬಳಲುತ್ತಾರೆ. ಚಿತ್ತಚಂಚಲತೆಯ ಖಿನ್ನತೆ ಹಲವಾರು ತಿಂಗಳುಗಳಿಂದ ಹಿಡಿದು ಹಲವಾರು ವರ್ಷಗಳವರೆಗೆ ಮುಂದುವರೆಯುತ್ತದೆ. ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಯ ಖಿನ್ನತೆಗೆ 'ಡಿಸ್ತೈಮಿಯಾ' (DYSHTHYMIA) ಎಂದು ಕರೆಯುತ್ತಾರೆ.


22 / ಖಿನ್ನತೆ: ಬನ್ನಿ ನಿವಾರಿಸೋಣ