ಪುಟ:Khinnate banni nivarisoona.pdf/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅನಗತ್ಯವಾಗಿ ಔಷಧ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಬಾರದು. ನಿಲ್ಲಿಸಬಾರದು. ಔಷಧಗಳ ದುರುಪಯೋಗವನ್ನು ತಡೆಗಟ್ಟಬೇಕು. ಔಷಧಿಗಳನ್ನು ಮುಕ್ತವಾಗಿ ಎಲ್ಲರ ಕೈಗೆ ಸಿಗುವ ರೀತಿಯಲ್ಲಿ ಖಂಡಿತ ಇಡಬಾರದು. ಖಿನ್ನತೆ ರೋಗಿಯಲ್ಲಿ ಆತ್ಮಹತ್ಯಾ ಪ್ರಯತ್ನದ ರಿಸ್ಕ್ ಇದ್ದರೆ ಔಷಧಗಳನ್ನು ರೋಗಿಯ ಕೈಗೆ ಕೊಡಲೇಬಾರದು. ಆಯಾ ಡೋಸನ್ನು ಅಥವಾ ಬೀರುವಿನಲ್ಲಿಟ್ಟು ಬೀಗ ಹಾಕಬೇಕು. ಮಾತ್ರೆಗಳು ಮಕ್ಕಳ ಕೈಗೆ ಸಿಗದಂತೆ ನೋಡಿಕೊಳ್ಳಿ, ಆಕಸ್ಮಿಕವಾಗಿ ಹತ್ತಿಪ್ಪತ್ತು ಮಾತ್ರೆಗಳನ್ನು ತಿಂದರೂ ಪ್ರಾಣಕ್ಕೆ ಅಪಾಯವಿಲ್ಲ. ಇಂಥ ಸಂದರ್ಭದಲ್ಲಿ ತಕ್ಷಣ ವೈದ್ಯರ ನೆರವನ್ನು ಪಡೆಯಿರಿ.

ವಿದ್ಯುತ್ ಕಂಪನ ಚಿಕಿತ್ಸೆ (ECT) (ELECTRO CONVULISIVE THERAPY)

ಸಣ್ಣ ಪ್ರಮಾಣದ (80 ರಿಂದ 100 ವೋಲ್ಟ್ ಕರೆಂಟ್) ವಿದ್ಯುತ್ತನ್ನು ಮಿದುಳಿನೊಳಕ್ಕೆ ಹಾಯಿಸಿ ಕಂಪನವನ್ನುಂಟುಮಾಡಿದಾಗ ನರವಾಹಕಗಳ ಉತ್ಪತ್ತಿ/ಸಮತೋಲನ ಸರಿ ಪ್ರಮಾಣಕ್ಕೆ ಬರುತ್ತದೆ. ಆಗ ಸಹಜವಾಗಿ ಖಿನ್ನತೆ ಹಾಗೇ ಸ್ಕಿಜೋಫ್ರಿನಿಯಾದಂತಹ ತೀವ್ರ ರೀತಿಯ ಮಾನಸಿಕ ಕಾಯಿಲೆಗಳು ಗುಣವಾಗುತ್ತವೆ; ಬೇಗ ಗುಣವಾಗುತ್ತವೆ. ಆದ್ದರಿಂದ ತೀವ್ರ ಖಿನ್ನತೆ ಕಾಯಿಲೆಯಲ್ಲಿ, ಆತ್ಮಹತ್ಯೆ ಮಾಡಿಕೊಳ್ಳುವ ರಿಸ್ಕ್ ಹೆಚ್ಚಿರುವ ವ್ಯಕ್ತಿಗಳಲ್ಲಿ ಖಿನ್ನತೆಯಿಂದ ಸಂಪೂರ್ಣವಾಗಿ ನಿಷ್ಕ್ರಿಯರಾಗಿರುವ (ಸೂಪರ್) ಪ್ರಕರಣಗಳಲ್ಲಿ ಚಿತ್ತವಿಕಲತೆ ಲಕ್ಷಣಗಳಿರುವ ಪ್ರಕರಣಗಳಲ್ಲಿ, ವಿದ್ಯುತ್ ಕಂಪನ ಚಿಕಿತ್ಸೆಯನ್ನು ನೀಡಲಾಗುತ್ತದೆ. ಎರಡು ದಿನಕ್ಕೊಮ್ಮೆ ಒಟ್ಟು 5 ಅಥವಾ 6 ಸಲ ಕೊಡಲಾಗುತ್ತದೆ. ಔಷಧವನ್ನು ಮುಂದುವರೆಸಲಾಗುತ್ತದೆ.

ಅನಿಸ್ತೀಸಿಯಾ (ಅರಿವಳಿಕೆ) ಕೊಟ್ಟು ಇಸಿಟಿ ಕೊಡುವುದರಿಂದ ರೋಗಿಗೆ ನೋವಾಗಲೀ, ಗಂಭೀರ ಅಡ್ಡ ಪರಿಣಾಮಗಳಾಗಲೀ ಆಗುವುದಿಲ್ಲ ಇಸಿಟಿ ಒಂದು ಅತ್ಯಂತ ಸುರಕ್ಷತಾ ಚಿಕಿತ್ಸಾ ವಿಧಾನವಾಗಿದೆ. ವೈದ್ಯರು ಇಸಿಟಿ ಕೊಡಲು ಪ್ಲಾನ್ ಮಾಡಿದರೆ ಭಯಪಡದೆ ಕೊಡಿಸಿ.


32 / ಖಿನ್ನತೆ: ಬನ್ನಿ ನಿವಾರಿಸೋಣ