ಪುಟ:Khinnate banni nivarisoona.pdf/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಈ ರೀತಿಯ ಸಂದರ್ಭಗಳಲ್ಲಿ ನಮಗೆ ಆಸರೆಯಾಗಬಲ್ಲ ಒತ್ತಾಸೆಯಾಗಿ ನಿಲ್ಲಬಲ್ಲವರ (ಮನೆಯವರು/ಬಂಧುಮಿತ್ರಸಹೋದ್ಯೋಗಿ ಗಳು, ಪರಿಚಿತ ಅನುಭವಿಗಳು) ನೆರವನ್ನು ಪಡೆದು ನಮ್ಮ ಸಾಮರ್ಥ್ಯವನ್ನು ಬಳಸಿಕೊಂಡು, ಸಮಸ್ಯೆ/ಸನ್ನಿವೇಶವನ್ನು ಎದುರಿಸಬೇಕು. ಆತಂಕಪಡದೆ, ಬೇಸರಪಡದೆ ಪ್ರಯತ್ನ ನನ್ನದು, ನೋಡೋಣ ದೇವರಿದ್ದಾನೆ, ನಾನಿದನ್ನು ನಿಭಾಯಿಸುತ್ತೇನೆ, ಬಂದದ್ದು ಬರಲಿ ಒಳ್ಳೆಯದೇ ಆಗುತ್ತದೆ. ಇದು ನನಗೆ ಪರೀಕ್ಷಾ ಕಾಲ. ಈ ಪರೀಕ್ಷೆಯಲ್ಲಿ ನಾನು ಪಾಸಾಗುತ್ತೇನೆ. ಹಿರಿಯರ ಆಶೀರ್ವಾದ ಇದೆ. ಗೆಳೆಯರ ಶುಭ ಹಾರೈಕೆಗಳಿವೆ, ದೇವರ ಕೃಪೆಯಿದೆ ಎಂದು ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕು. ನೆಮ್ಮದಿಯಿಂದ ಇರಲು ಪ್ರಯತ್ನಿಸಬೇಕು.

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ |
ಎಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ||
ಬೆಲ್ಲಲೋಕಕ್ಕಾಗಿ ತನಗೆ ತಾಂ ಕಲ್ಲಾಗ
ಬಲ್ಲವನೆ ಮುಕ್ತನಲ-ಮಂಕುತಿಮ್ಮ

ಎಲ್ಲರೊಳಗೆ ತಾನು ಮತ್ತು ತನ್ನೊಳಗೆ ಎಲ್ಲರೂ ಇರುವಂತೆ, ಎಲ್ಲೆಲ್ಲಿಯೂ ನೋಡಿ ನಡೆದುಕೊಳ್ಳುತ್ತಾ, ಎಲ್ಲರ ಸುಖ-ದುಃಖಗಳಲ್ಲಿ ಭಾಗಿಯಾಗುತ್ತಾ, ಲೋಕಕ್ಕೆ ಬೆಲ್ಲದಂತೆ ಸಿಹಿಯಾಗಿರುತ್ತಾ, ತನಗೆ ಮಾತ್ರ ಕಲ್ಲಾಗಬಲ್ಲವನು 'ಮಾನಸಿಕ ಆರೋಗ್ಯವಂತ'.

■ ■




44 / ಖಿನ್ನತೆ: ಬನ್ನಿ ನಿವಾರಿಸೋಣ