ಪುಟ:Mahakhshatriya.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಭೋಗಗಳಿಂದ ಸುಖವಾಗಲೆಂದು ಲೋಕಲೋಕದಲ್ಲಿರುವ ಪ್ರಜೆಗಳು ಪ್ರತಿಯೊಬ್ಬರಿಗೂ ಭೋಗಗಳನ್ನೂ ಭೋಗಸಾಧನೆಗಳನ್ನೂ ಭೋಗಫಲವಾದ ಸುಖ-ದುಃಖಗಳನ್ನೂ ಹಂಚುವೆವು. ಅಸುರರೋ? ಅಸುರ ಸಾಮ್ರಾಜ್ಯವಾದರೆ ತಪ್ಪೇನು?”

“ದೇವತೆಗಳು ಸುಖವನ್ನು ವರ್ಧಿಸುವವರು. ಅಸುರರು ದುಃಖವನ್ನು ವರ್ಧಿಸುವವರು. ಹಸುವು ಹುಲ್ಲು ತಿನ್ನಲಿ, ಸೊಪ್ಪÅ ತಿನ್ನಲಿ, ಹೊಟ್ಟು ತಿನ್ನಲಿ, ಹಿಂಡಿ ತಿನ್ನಲಿ ಅದರಲ್ಲಿ ಹಾಲೇ ಹೆಚ್ಚುವುದು. ಬೇವಿನ ಗಿಡಕ್ಕೆ ಏನು ಹಾಕಿ ಪೋಷಿಸಿದರೂ ಅದರ ರಸವು ಕಹಿಯಾಗಿಯೇ ಇರುವುದು. ಹಾಗೆ ಹವ್ಯಾದಿಗಳಿಂದ ಆರಾಧಿತರಾದರೆ ದೇವತೆಗಳು ಸುಖವನ್ನೂ, ಸುಖವನ್ನು ಅನುಭವಿಸುವ ಶಕ್ತಿಯನ್ನೂ, ಅದು ಕೊನೆಯಲ್ಲಿ ಆನಂದವಾಗುವ ಶಕ್ತಿಯನ್ನೂ ಬೆಳೆಸುವರು. ಅಸುರರು ಹವ್ಯಾಸಿಗಳಿಂದ ಆರಾಧಿತರಾದರೂ, ದುಃಖವನ್ನೂ, ಎಲ್ಲವೂ ದುಃಖದಲ್ಲೇ ಪರ್ಯವಸಾನವಾಗುವಂತೆ ಮಾಡುವ ಶಕ್ತಿಯನ್ನೂ ಹೇಗೆ ಹೇಗೊ, ಕೊನೆಗೆ ದುಃಖವೇ ಆಗುವಂತಹ ಶಕ್ತಿಯನ್ನೂ ಬೆಳೆಸುವರು. ಅದರಿಂದಲೇ ನಿಸರ್ಗವು ಅವರನ್ನು ತುಳಿದಿರಿಸಿ, ದೇವತೆಗಳಿಗೆ ಅಜರಾಮರತ್ವವನ್ನು ಕೊಟ್ಟಿರುವುದು.ನಿಸರ್ಗದತ್ತವಾದ ಈ ಸ್ಥಿತಿಯನ್ನು ಕಾಪಾಡಿಕೊಂಡು ಹೋಗಲೇಬೇಕು. ಈ ಸ್ಥಿತಿಯನ್ನು ಕಾಪಾಡಲು ಧರ್ಮಾಚಾರ್ಯನು ಇದ್ದೇ ಇರಬೇಕು” ಎಂದು ಮುಂತಾಗಿ ಯೋಚಿಸುತ್ತಿದ್ದನು.

ಶಚಿಯು ಮಗ್ಗುಲಲ್ಲಿ ಕುಳಿತು ಗಂಡನಿಗೆ ಬೀಸಣಿಗೆಯಿಂದ ಸಣ್ಣಗೆ ಗಾಳಿ ಹಾಕುತ್ತಿದ್ದಾಳೆ. ಆತನ ಮುಖವು ತೇಜೋವಿಹೀನವಾಗಿರುವುದರಿಂದಲೇ ಆಕೆಯು ಊಹಿಸಿಕೊಂಡಿದ್ದಾಳೆ. ಸಾಲದುದ್ದಕ್ಕೆ ದೇವಲೋಕದಲ್ಲೆಲ್ಲಾ ಗುಸುಗುಂಪಾಲಾಗಿ ಆಡಿಕೊಳ್ಳುತ್ತಿರುವ ಮಾತು ಆಕೆಯ ಕಿವಿಗೂ ಬಿದ್ದಿದೆ. “ದೇವೇಂದ್ರನು ದೇವಗುರುಗಳಿಗೆ ಮರ್ಯಾದೆಯನ್ನು ತೋರಲಿಲ್ಲವೆಂದು ಅವರು ಎಲ್ಲಿಯೋ ಹೊರಟೇ ಹೋಗಿರುವರಂತೆ ! ಅದರಿಂದ ಏನೇನು ಅನರ್ಥಗಳಾದಾವೊ !” ಎಂದು ಭೀತಿ ಪಡುವವರು ಕೆಲವರು. “ಉಂಟೇನು ? ದೇವತೆಗಳೆಲ್ಲರ ಸಮಷ್ಟಿ ಕಾರ್ಯ ಲೋಕಕ್ಷೇಮವನ್ನು ನೋಡಿಕೊಳ್ಳುವುದು. ಅದರಿಂದ ದೇವಗುರುವು ಬಹುದಿನ ಎಲ್ಲಿಯೂ ತಲೆ ತಪ್ಪಿಸಿಕೊಳ್ಳುವಂತಿಲ್ಲ. ಎಲ್ಲಿದ್ದರೂ ಬಂದೇ ಬರಬೇಕು” ಎಂದು ಇನ್ನು ಕೆಲವರು.

“ಒಂದು ವೇಳೆ ಅಧಿಕಾರದಲ್ಲಿರುವವರು ಕಾರಣಾಂತರಗಳಿಂದ ತಪ್ಪಿ ನಡೆದರೂ ಗುರುಗಳಾದವರು ಅದನ್ನು ಸಹಿಸಿಕೊಂಡು ನಡೆದರೆ ಏನು ತಪು ?