ಪುಟ:Mahakhshatriya.pdf/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆನಂದಪರವಶನಾಗಿ ಅರಸನು ತನ್ನ ಪ್ರಶ್ನೆಗಳನ್ನು ಮರುದಿನ ಕೇಳುವುದು ಎಂದುಕೊಳ್ಳುತ್ತಾನೆ. ಹೀಗೆಯೇ ದಿನವೂ ಆಗುತ್ತಿದೆ.

ಒಂದು ದಿನ ಭಗವಾನರು ಸುಖಾಸನಾಸೀನರಾಗಿ ಅಂತರ್ದೃಷ್ಟಿಗಳಾಗಿ ಆತ್ಮಾರಾಮರಾಗಿದ್ದಾರೆ. ಚಕ್ರವರ್ತಿಯು ರಾಜದೂತನನ್ನು ಹಿಂದಿಟ್ಟುಕೊಂಡು ಏಕಾಕಿಯಾಗಿ ಬಂದು ಪರ್ಣಕುಟಿಯ ಬಾಗಿಲಲ್ಲಿ ನಿಂತಿದ್ದಾನೆ. ಅವರಿರುವ ಸ್ಥಿತಿಯನ್ನು ಕಂಡು ಅವರ ಆ ಸಮಾಧಿಯನ್ನು ಭಂಗಪಡಿಸಲು ಇಷ್ಟವಿಲ್ಲದೆ ದೂರದಿಂದಲೇ ನಮಸ್ಕಾರ ಮಾಡಿ ಕೊಂಚ ಮರೆಯಾಗಿ ತೃಣಾಸನದಲ್ಲಿ ಕುಳಿತಿದ್ದಾನೆ. ಸಭಾಕಾಲವು ಇನ್ನೂ ಬಂದಿಲ್ಲ.

ಅಷ್ಟು ಹೊತ್ತಾಯಿತು. ಸೂರ್ಯನು ಪಶ್ಚಿಮದಲ್ಲಿ ಇಳಿಯುತ್ತಾ ಪ್ರಸರಿಸಿದ್ದ ಕಿರಣಗಳನ್ನ ಉಪಸಂಹಾರಮಾಡುವ ಕಾಲವಾಯಿತು. ಬಿಸಿಲು ತಂಪಿತು. ಇನ್ನಷ್ಟು ಹೊತ್ತಾದರೆ ಋತ್ವಿಕ್ಪುರೋಹಿತರು ಭಗವಾನರನ್ನು ಧರ್ಮಸಭೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಅವರೂ ಬಹಿರ್ಮುಖಿಗಳಾದರು. ಶುದ್ಧಾಚಮನಮಾಡಿ ಚಕ್ರವರ್ತಿಯನ್ನು ಸಮ್ಮುಖಕ್ಕೆ ಕರೆದರು. ಆತನೂ ಬಂದು ನಮಸ್ಕಾರ ಮಾಡಿ ಕುಳಿತನು. ಬ್ರಹ್ಮರ್ಷಿಗಳು ತಾವೇ ಮಾತನಾಡುತ್ತಾ. “ಏನು ಮಹಾರಾಜ, ನೀನೇ ಬರಬೇಕಾಗಿತ್ತೇ ? ಈ ದಿನ, ನಿನ್ನನ್ನು ಕೇಳಿ, ನಿನ್ನ ಮನಸ್ಸಿನಲ್ಲಿರುವ ವಿಚಾರವನ್ನೇ ಆರಂಭಿಸಬೇಕು ಎಂದಿದ್ದೇನೆ, ಸರಿ ತಾನೇ ?” ಎಂದು ಕೇಳಿದರು.

ಅರಸನು ವಿನಯದಿಂದ “ಅದು ನನ್ನ ಭಾಗ್ಯ !” ಎಂದನು.

“ಇನ್ನು ನಾನು ಇಲ್ಲಿಂದ ಹೊರಡುವ ಕಾಲ ಬಂದಿದೆ. ಬ್ರಾಹ್ಮಣನು ಭೋಗಗಳಿಗೆ ವಶನಾಗಬಾರದು. ಭೋಗಲಾಲಸೆಯು ಇಂದ್ರಿಯಗಳಲ್ಲಿ ಬೇರೂರಿದರೆ, ಅವು ದುಷ್ಟಾಶ್ವಗಳಂತೆ ಕೈಮೀರುವುವು. ಇಂದ್ರಿಯಗಳನ್ನು ಅಧೀನದಲ್ಲಿಟ್ಟುಕೊಳ್ಳದೆ ಅವುಗಳ ಅಧೀನನಾದವನ ತೇಜಸ್ಸು ಹಸಿಯ ಮಡಕೆಯಲ್ಲಿಟ್ಟ ನೀರಿನಂತೆ ಜಾರಿಹೋಗುವುದು. ಹಾಗೆ ಆಗಬಾರದು. ಬ್ರಾಹ್ಮಣನು ಯಾವಾಗಲೂ ಆತ್ಮತೇಜಸ್ಸನ್ನು ವಿವೃದ್ಧಿ ಮಾಡುತ್ತಿರಬೇಕು.

“ಇಲ್ಲಿಯೂ ತಾವು ತಪೋವನದಲ್ಲಿರುವಂತೆಯೇ ಇರುವಿರಲ್ಲವೇ ?”

“ಆದರೂ ಇದು ನಿನ್ನ ಕ್ಷೇತ್ರ. ನೀನು ಸತ್ತ್ವಗುಣಸಂಪನ್ನನಾದರೂ ನಿನ್ನ ಅಧಿಷ್ಠಾನಾದಿಗಳೆಲ್ಲವೂ ರಜೋಗುಣದವು. ಅದರಿಂದ ಇಲ್ಲಿ ಇರುವವರೆಗೂ ಸತ್ತ್ವಲಕ್ಷಣವಾದ ಶಾಂತಿದಾಂತಿಗಳು ಒಂದು ಪಾದ ಹಿಂದಿರುವುವು. ನಿನ್ನ ಇಷ್ಟದಂತೆ ಇಲ್ಲಿದ್ದು ಧರ್ಮಕಥಾಲಾಪ ನಡೆಸಿಯಾಯಿತು. ಇನ್ನು ಬರುವ ಪ್ರತಿಪದೆಯ ಸ್ಥಾಲೀಪಾಕವಾದ ಮೇಲೆ ಇಲ್ಲಿಂದ ಹೊರಡುವೆನು.”