ಪುಟ:Mahakhshatriya.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೀರು ಅಲೆಗಳನ್ನು ಸೃಷ್ಟಿಸಬೇಕೆಂದು ಪ್ರಯತ್ನಮಾಡಿ ಅಲೆಗಳನ್ನು ಎಸೆಯುವುದಿಲ್ಲ. ಅದರ ಚಂಚಲಸ್ವಭಾವವೇ ಅಲೆಗಳಾಗಿ ತೋರುತ್ತದೆ. ನೀರಿನ ಮೇಲ್ಮೈಯೆಲ್ಲಾ ಅಲೆಯೇ ! ಆದರೆ ಕೆಳಗಿಳಿದು ನೋಡಿದರೆ, ಒಂದೆರಡು ಮಟ್ಟು ಮುಳುಗಿ ನೋಡಿದರೆ, ಅಲ್ಲಿ ನೀರು ಘನವಾಗಿ ಒಂದೇ ಮುದ್ದೆಯಾಗಿ ನಿಂತಿರುವಂತೆ ತೋರುತ್ತದೆ. ಜಲಚರಗಳ ಸಂಚಾರದಿಂದ ಅಲ್ಲಾಡಿದಂತೆ ಕಂಡರೂ ನಿಶ್ಚಲವಾಗಿರುತ್ತದೆ. ಹಾಗೆ ಜ್ಞಾನವು ಪ್ರಜ್ಞಾನವಾಗಿ ಘನವಾಗಿ ಸ್ಥಿರವಾಗುವವರೆಗೂ ಸಂದೇಹಗಳು ಬಂದೇ ಬರುತ್ತಿರುವುವು. ಜ್ಞಾನ ಪ್ರಜ್ಞಾನವಾಗಿ ಘನವಾಗುವುದು ಎಂದರೇನು ಎನ್ನುವಿರೇನೋ ? ತನಗಿಂತ ದೊಡ್ಡದೊಂದು ವಸ್ತುವಿದೆ. ಅದು ತನ್ನ ಒಳಗೂ ಹೊರಗೂ ತುಂಬಿದೆ. ಅದು ಮಡುವಿನಂತೆ ಇದ್ದರೆ ತಾನು. ‘ನಾನು’ ಎನ್ನುವುದು ಅದರಲ್ಲಿ ಒಂದು ಮಡಕೆಯಂತೆ. ನೀರಿನಲ್ಲಿ ಮುಳುಗಿದ ಮಡಕೆಯಲ್ಲಿರುವ ನೀರೂ ಅದರ ಹೊರಗಿರುವ ನೀರೂ ಏಕರಸವೆಂಬ ಅರಿವೇ ಜ್ಞಾನ. ಆ ಅರಿವು ಬಲಿತು ನೀರನ್ನು ತುಂಬಿಕೊಂಡಿರುವ ಮಡಕೆಯೂ ಅದರಲ್ಲಿರುವ ನೀರೂ ಬೇರೆಬೇರೆಯೆಂಬುದನ್ನು ತಿಳಿದುಕೊಳ್ಳುವುದು ವಿಜ್ಞಾನ. ಬಾಯಲ್ಲಿ ಒತ್ತರಿಸಿಕೊಂಡಿರುವ ತಂಬುಲವು ತನ್ನ ಇರುವಿಕೆಯನ್ನು ಮರೆಯಲು ಎಡೆಯನ್ನೇ ಕೊಡದೆ ಇರುವಂತೆ ವಿಜ್ಞಾನವು ಮರೆಯದೆ ಅರಿವೇ ಆಗಿ ಘಟವು ಬೇರೆ, ಅದರಲ್ಲಿರುವ ಚೇತನವೇ ಬೇರೆ, ಎಂಬ ನಿಶ್ಚಯಜ್ಞಾನವು ಸಂತತವಾಗಿ ಉರಿಯುತ್ತಿರುವ ದೀಪದ ಬೆಳಕಿನಂತೆ ಅವಕಾಶವಿದ್ದೆಡೆಯಲ್ಲೆಲ್ಲಾ ತುಂಬಿರುವುದೇ ಪ್ರಜ್ಞಾನ. ಅದನ್ನು ಮರೆಯದೆ ವ್ಯವಹಾರ ಮಾಡುತ್ತಿರುವುದೇ ಪ್ರಜ್ಞಾನಘನದಲ್ಲಿರುವುದು. ಅಂತಹ ಪ್ರಜ್ಞಾನ ಘನದಲ್ಲಿ ಪ್ರವೇಶವಾಗುವವರೆಗೂ ಸಂದೇಹಗಳು ಬಿಡುವುದಿಲ್ಲ. ತುಂಬಿದ ಕತ್ತಲಿನಲ್ಲಿ ಕಣ್ಣು ಕಾಣದೆ ಹೋದಾಗಲೂ ಸಂದೇಹಗಳಿಲ್ಲ : ನಡುಹಗಲಿನಲ್ಲಿ ಬೆಳಕು ತಾನೇ ತಾನಾಗಿರುವಾಗಲೂ ಸಂದೇಹವಿಲ್ಲ. ಬೆಳಕು - ಕತ್ತಲುಗಳು ಒಂದರಲ್ಲಿ ಒಂದು ವ್ಯಾಪ್ತವಾದಾಗ, ಸಂದೇಹಗಳು. ಹಾವೋ ಹುಲ್ಲಿನ ಹರವಿಯೋ ಎಂದು ಸಂದೇಹಪಡುವುದು ಸಂಜೆಯ ಕಾಳವಳದಲ್ಲಿ ಮಾತ್ರ. ಹಾಗೆ ಅರಿವು ಬಂದು ಬಲಿತು ಹೆಪ್ಪುಗಟ್ಟಿ ಮುದ್ದೆಯಾಗುವವರೆಗೂ ಸಂದೇಹವು ತಪ್ಪುವುದಿಲ್ಲ. ಮನಸ್ಸಿನ ಅಪೂರ್ಣತೆಯೇ ಜ್ಞಾನದ ದೌರ್ಬಲ್ಯವೇ ಸಂದೇಹ. ಅಲ್ಲದೆ ಸಂದೇಹವು ಬಂದರೆ ಏಕೆ ಒದ್ದಾಡಬೇಕು? ಆ ಸಂದೇಹದ ಹಿಂದೆಯೇ ಸಿದ್ಧಾಂತವೂ ಇದ್ದೇ ಇರುತ್ತದೆ.”

“ಹಾಗಾದರೆ ಅರ್ಥವಾಗಲಿಲ್ಲ. ಭಗವಾನರು ದಯಮಾಡಿ ಅದನ್ನು ಇನ್ನೂ ವಿಶದವಾಗಿ ಹೇಳಬೇಕು.”