ಪುಟ:Mahakhshatriya.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಮಗೇನೋ ಬೃಹಸ್ಪತ್ಯಾಚಾರ್ಯರು ಮಾಡಿದುದು ಕೊಂಚವೂ ಒಪ್ಪಿತವಿಲ್ಲ. ಇದರಿಂದ ಏನೇನು ಅನರ್ಥವಾಗುವುದೋ ?” ಎಂದು ಇನ್ನು ಕೆಲವರು.

“ಅಂತಹ ಕಾಲ ಬಂದರೆ ದೇವರಾಜನು ಹೋಗಿ ಇನ್ನೊಬ್ಬ ಧರ್ಮಾಚಾರ್ಯನನ್ನು ಹುಡುಕಿಕೊಂಡು ಬರುವನು. ಏನು ಮಹಾ!” ಎಂದು ಇನ್ನು ಕೆಲವರು.

ಹೀಗೆ ನಾನಾವಿಧವಾಗಿ ಆಡಿಕೊಳ್ಳುತ್ತಿರುವ ಮಾತುಗಳೆಲ್ಲ ಆಕೆಯ ಕಿವಿಗೂ ಬಿತ್ತು. ತನ್ನ ಕಿವಿಗೆ ಬಿದ್ದುದು ಇಂದ್ರನ ಕಿವಿಗೂ ಬಿದ್ದೇ ಇರಬೇಕು. ಅದರಿಂದ ಅದನ್ನೇಕೆ ಪ್ರಸ್ತಾಪಿಸಿ, ಆತನ ಮನಸ್ಸಿಗೆ ನೋವುಂಟು ಮಾಡಬೇಕು ಎಂದು ಆಕೆಯು ಸುಮ್ಮನಿದ್ದಾಳೆ. ಆದರೂ ಪ್ರಸ್ತಾಪಿಸುವುದೇ ಒಳ್ಳೆಯದೇನೋ ಎಂದು ಇನ್ನೊಂದು ಮನಸ್ಸು.

ಆ ವೇಳೆಗೆ ಪ್ರಹರಿಯು ತೇಜೋಮಂಡಲವಾಗಿ ಸನ್ನಿಧಾನಕ್ಕೆ ಪ್ರವೇಶಿಸಿ, ‘ಚಿತ್ರರಥನೆಂಬ ಗಂಧರ್ವಪತಿಯು ಬಂದಿರುವನು’ ಎಂದು ಬಿನ್ನವಿಸಿದನು. ಶಚಿಯು ಸುರಪತಿಯ ಮುಖವನ್ನು ನೋಡಿ, ಆತನ ಇಂಗಿತದಂತೆ ‘ಗಂಧರ್ವಪತಿಯನ್ನು ಬರಮಾಡು’ ಎಂದು ಪ್ರಹರಿಗೆ ಸೂಚಿಸಿದಳು. ಆತನು ಚಿತ್ರರಥನನ್ನು ಬರಮಾಡಿದನು.

ಚಿತ್ರರಥನು ಬಂದು ತ್ರಿಲೋಕಾಧಿಪತಿಗೆ ಸಲ್ಲಿಸಬೇಕಾದ ಮರ್ಯಾದೆಗಳನ್ನೆಲ್ಲಾ ಸಲ್ಲಿಸಿ ಅಪ್ಸರೋಗಂಧರ್ವರು ಸೇವೆಗಾಗಿ ಬಂದಿರುವುದನ್ನು ನಿವೇದಿಸಿದನು. ದೇವೇಂದ್ರನ ಮುಖದ ತೇಜಸ್ಸಿನಿಂದಲೇ ಆತನು ಆ ದಿನ ಘನಸಂಗೀತ ನರ್ತನಗಳಿಗೆ ಸಿದ್ಧನಾಗಿಲ್ಲವೆಂದು ತಿಳಿದು, ತನ್ನ ಗಣಗಳನ್ನು ಕರೆಸಿ, ಲಘುಗೀತ ನರ್ತನಗಳಿಂದ ಅಮರಪತಿಯನ್ನು ಓಲೈಸಿ, ಕರ್ತವ್ಯ ನಿರ್ವಾಹಮಾಡಿ ಹೋದನು.

ಎಂದಿನಂತೆ ಆಗಿದ್ದರೆ ದೇವರಾಜನು ಆ ಕೂಡಲೇ ಏಳಬೇಕಾಗಿತ್ತು. ಅಂದು ಏಕೋ ಇನ್ನೂ ಅಲ್ಲಿಯೇ ಕುಳಿತಿದ್ದನು. ಗೂಢಚಾರದ ಪಡೆಯ ಮುಖಂಡನು ಬಂದು ಕಾಣಿಸಿಕೊಂಡನು. ಏನೆಂದು ವಿಚಾರಿಸಲು, ಅವರು “ಜೀಯಾ, ಅಸುರಲೋಕದಲ್ಲಿ ಎಂದೂ ಇಲ್ಲದ ಸಂಭ್ರಮವು ಕಂಡುಬರುತ್ತಿದೆ. ಎಲ್ಲರೂ ಆಯುಧಗಳನ್ನು ಸಿದ್ಧಮಾಡಿಕೊಳ್ಳುತ್ತಿದ್ದಾರೆ. ಅವರ ವಾಹನಗಳು ತೇಜಸ್ವಿಗಳಾಗಿವೆ. ಅಸುರ ಸೇನಾಡಂಬರವು ಕಡಲಿನಂತೆ ಉಕ್ಕುತ್ತಿದೆ” ಎಂದನು.

ಇಂದ್ರನು ತಲೆದೂಗಿದನು. “ಹೌದು, ಹೌದು. ನಮ್ಮ ದುರ್ಬಲತೆಯೇ ಇತರರ ಬಲ. ಇರಲಿ, ಪ್ರಭಾವದಿಂದ ಸೋಲಿಸಿದ್ದವರನ್ನು ಇನ್ನು ಮೇಲೆ ಪ್ರತಾಪದಿಂದ ಸೋಲಿಸಬೇಕು. ದಿಕ್ಪಾಲಕರನ್ನೆಲ್ಲ ಸಿದ್ಧವಾಗಿರಬೇಕೆಂದು ಓಲೆಯನ್ನು