ಪುಟ:Mahakhshatriya.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಷ್ಟರೊಳಗಾಗಿ ಆಕೆಗೆ ಪ್ರಜ್ಞೆಯು ತಪ್ಪಿತು. ಬಿದ್ದುಹೋಗಬೇಕು ಅಷ್ಟರೊಳಗಾಗಿ ಇಂದ್ರನು ಆಕೆಯನ್ನು ಹಿಡಿದುಕೊಂಡು, ಹಾಗೆಯೇ ತಂದು ಸುಖಾಸನದಲ್ಲಿ ಮಲಗಿಸಿದನು. ಶಚಿಯ ಮೈಯಲ್ಲಿ ಯಾವಾಗಲೂ ಘಮಘಮವೆಂದು ಸುವಾಸನೆಯು ಪುಷ್ಪಗುಚ್ಛದಲ್ಲಿರುವುದಕ್ಕಿಂತ ಹೆಚ್ಚಾಗಿ ಮಸಗುತ್ತಿರಬೇಕು. ಅದಕ್ಕೆ ಪ್ರತಿಯಾಗಿ ಏನೋ ದುರ್ವಾಸನೆಯು ಮೂಗಿಗೆ ತೋರುತ್ತಿದೆ. ಬರಬರುತ್ತ ಅದೂ ಬಲವಾಗುತ್ತಿದೆ. ಇಂದ್ರನಿಗೆ ಏನು ಮಾಡಬೇಕೋ ತೋರದಿದೆ.

ಆ ಹೊತ್ತಿಗೆ ಸರಿಯಾಗಿ ಅಗ್ನಿವಾಯುಗಳೂ ಆಚಾರ್ಯನೊಡನೆ ಬಂದರು. ಆಚಾರ್ಯನು ಶಚಿಯನ್ನು ನೋಡುತ್ತಿದ್ದ ಹಾಗೆಯೇ “ಇಂದ್ರ, ತೆಗೆದುಕೋ, ನಿನ್ನ ವಜ್ರಾಯುಧವನ್ನು ತೆಗೆದುಕೋ... ಹೊಡೆ, ಹೊಡೆ, ಅದೋ ನೋಡು. ವೃತ್ರನ ಪ್ರೇತವು ಪೃಥ್ವೀ ಭೂತವನ್ನು ಹಿಡಿದಿದೆ. ಅದರಿಂದಲೇ ಈ ದುರ್ಗಂಧ ! ಮೊದಲು ಹೊಡೆ...” ಎಂದನು.

ಇಂದ್ರನು ವಜ್ರಾಯುಧವನ್ನು ಅನುಸಂಧಾನ ಮಾಡಿದನು. ಹಾಗೆಯೇ ಪೃಥ್ವೀಭೂತವನ್ನು ಅನುಸಂಧಾನ ಮಾಡಿದನು. ಪೃಥ್ವೀಭೂತವೂ ದೃಗ್ಗೋಚರವಾಯಿತು. ನೇರಿಲೆಯ ಹಣ್ಣಿನ ಬಣ್ಣವಾಗಿ, ಗಂಧವೇ ಪ್ರಧಾನಲಕ್ಷಣವಾಗಿರುವ ಪೃಥ್ವೀಭೂತಕ್ಕೆ ಕೆಟ್ಟ ಕಪ್ಪು ಬಡಿದಿದೆ. ತಮೋರಾಶಿಯೋ ಎಂಬಂತಾಗಿದೆ. ವಜ್ರವನ್ನು ಎಲ್ಲಿ ಪ್ರಯೋಗ ಮಾಡಬೇಕು? ಖನಿಜ, ಉದ್ಭಿಜ, ಸ್ವೇದಜ, ಅಂಡಜ, ಜರಾಯುಜ ಸಮೇತವಾದ ಪಂಚೀಕೃತ ಭೂಮಂಡಲವೊಂದು ಕಡೆ ಕಾಣಿಸುತ್ತಿದೆ. ಅಪಂಚೀಕೃತವಾದ ಶುದ್ಧ ಪೃಥ್ವೀಮಂಡಲವೊಂದು ಕಡೆ ಕಾಣುತ್ತಿದೆ. ಇಂದ್ರನು ಯಾವುದರ ಮೇಲೆ ವಜ್ರವನ್ನು ಪ್ರಯೋಗಿಸಬೇಕು? ವಜ್ರಾಹುತಿಗೆ ಸಿಕ್ಕಿ ಭೂಮಿಯಲ್ಲಿರುವ ಲೋಕಲೋಕಗಳೆಲ್ಲ ಧ್ವಂಸವಾಗಿ ಹೋದರೆ? ಅವುಗಳಲ್ಲಿ ತಾನೂ ಒಬ್ಬ ಶಚಿಯೂ ಒಬ್ಬಳು. ದೇವಲೋಕವು ಒಂದು ಭಾಗ. ಏನು ಮಾಡಬೇಕೋ ತಿಳಿಯದೆ ಇಂದ್ರನು ಮುಗ್ಧನಾಗಿದ್ದಾನೆ ಅಷ್ಟೇ ಅಲ್ಲ ತನಗೆ ಏನೂ ತಿಳಿಯದಾಗಿದೆಯೆಂಬುದನ್ನು ಹೇಳಲೂ ತೋರದೆ ಸುಮ್ಮನಿದ್ದಾನೆ.

ಆಚಾರ್ಯನು ಆತನ ಅಂತಃಸಂಕಟವನ್ನು ತಿಳಿದನು. “ಇಂದ್ರ, ಮಹಾಕಾಶದಲ್ಲಿ ನಿಂತು, ‘ದೇವಶತ್ರುವಾಗಿ ಈಗ ಪೃಥ್ವಿಭೂತವನ್ನು ಹಿಡಿದಿರುವ ವೃತ್ರನ ಮೇಲೆ ಈ ಪ್ರಯೋಗ’ ಎಂದು ಸಂಕಲ್ಪಿಸಿ ಪ್ರಯೋಗಿಸು” ಎಂದನು. ಇಂದ್ರನು ಪರಪ್ರಚೋದಿತನಾಗಿ ಕಾರ್ಯಮಾಡುವವನಂತೆ ಆಚಾರ್ಯನ ನಿರ್ದೇಶದಂತೆ ಸಂಕಲ್ಪಮಾಡಿ, ಸಂಕಲ್ಪಪೂರ್ವವಾಗಿ, ವೃತ್ರನನ್ನು ಗುರಿಗೈದು