ಪುಟ:Mahakhshatriya.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶುದ್ಧ ಪೃಥ್ವೀಭೂತ, ಪಂಚೀಕೃತ ಪೃಥ್ವೀಭೂತ, ಎರಡರ ಮೇಲೆಯೂ ವಜ್ರವನ್ನು ಪ್ರಯೋಗಿಸಿದನು. ಭೂಕಂಪವಾಯಿತು. ಕುಲಾಚಲ ಪರ್ವತಗಳೂ ನಡುಗಿಹೋದವು. ಎಲ್ಲಿಂದಲೋ ‘ಅಯ್ಯೋ’ ! ಎಂಬ, ನೂರು ಸಿಡಿಲುಗಳು ಒಂದೇ ಸಲ ಬಿದ್ದರೆ ಆಗುವಂತಹ ಘೋರವಾದ ಸದ್ದಾಯಿತು. ಅದನ್ನೇ ಕೇಳಿ ಅಗ್ನಿವಾಯುಗಳೂ ಹೆದರಿದರು. ಇಂದ್ರನು ತಲ್ಲಣಿಸಿದನು. ಶಚಿಯು ಒದ್ದಾಡಿಹೋದಳು. ಆಚಾರ್ಯನೊಬ್ಬನು ಧೀರನಾಗಿ ಕುಳಿತಿದ್ದಾನೆ.

ಆತನಿಗೂ ಒಳಗೊಳಗೆ ದಿಗಿಲಾಯಿತೊ ಏನೋ ? “ಇರಲಿ ಸಮಯಕ್ಕೆ ಬೇಕಾದೀತು” ಎಂದು ಸಪ್ತರ್ಷಿಗಳನ್ನು ನೆನೆದನು. ಅವರೂ ಅವಸರ ಅವಸರವಾಗಿ “ಏನು ? ಏನು ?” ಎಂದು ಬಂದರು. ಆಚಾರ್ಯನು ನಡೆದುದು ಎಲ್ಲವನ್ನೂ ಅವರಿಗೆ ಅರಿಕೆ ಮಾಡಿ, “ಏನಾದರೂ ಆಗಲಿ, ನೀವು ಇರುವುದು ಒಳ್ಳೆಯದು ಎಂದು ತಮ್ಮನ್ನು ಬರಮಾಡಿಕೊಂಡೆ” ಎಂದನು. ಅವರೂ “ಹೌದು, ಹೌದು, ಅಕಾಲದಲ್ಲಿ ಆದ ಈ ಮಹಾಶಬ್ದವನ್ನು ಕೇಳಿ ನಮಗೂ ಕುತೂಹಲವಾಗಿ, ನೋಡಿದೆವು. ಇದು ಆ ಹತನಾದ ವೃತ್ರನ ಶಬ್ದ ಎಂದು ತಿಳಿಯಿತು. ನಾವು ಮಹೇಂದ್ರನ ರಕ್ಷಣೆಗೆ ಬರಬೇಕು ಎಂದುಕೊಂಡೆವು. ಅಷ್ಟರಲ್ಲಿ ಆಚಾರ್ಯನಿಂದ ಕರೆಯೂ ಬಂತು” ಎಂದರು.

ವಜ್ರಘಾತದಿಂದ ನೊಂದ ವೃತ್ರನು ತನ್ನದೊಂದು ಆವರಣವನ್ನು ಕಳೆದುಕೊಂಡುದು ಎಲ್ಲರಿಗೂ ಗೊತ್ತಾಯಿತು. ವೃತ್ರನು ಸಾಯಲಿಲ್ಲ. ಪೃಥ್ವೀಭೂತದಿಂದ ನೆಗೆದನು. ಎಲ್ಲರೂ ಕಣ್ಣಲ್ಲಿ ಕಣ್ಣಿಟ್ಟುಕೊಂಡು ನೋಡಿದರು. ಎಲ್ಲರಿಗೂ ಬಾಯಿ ಅಂಟುಅಂಟಾಗಿದೆ. ಏನೋ ಕೆಟ್ಟ ರುಚಿ. ಆಚಾರ್ಯನು ಅನುಸಂಧಾನ ಮಾಡಿ ನೋಡಿದನು. ಶಚಿಯು ಇತ್ತ ಕುಗ್ಗುತ್ತಿದ್ದಾಳೆ. ಎಳೆಯ ಬಾಳೆಯ ಸುಳಿಯು ಬೆಂಕಿಯ ಝಳಕ್ಕೆ ಸಿಕ್ಕಿದರೆ ಒಣಗುವಂತೆ ಒಣಗುತ್ತಿದ್ದಾಳೆ. ಇಂದ್ರನು “ಆಚಾರ್ಯ, ಇದೇನು ? ಇಲ್ಲಿ ನೋಡಿ, ಏನೋ ಆಗಿಹೋಗುತ್ತಿದೆ” ಎಂದು ಕೂಗಿಕೊಂಡನು. ಆಚಾರ್ಯನು ಕಣ್ಣುಬಿಟ್ಟು ನೋಡಿದನು. ಸಪ್ತರ್ಷಿಗಳು ನಕ್ಕು “ದಿಗಿಲಿಲ್ಲ. ನೋಡು, ನೋಡು” ಎಂದರು. ಆಚಾರ್ಯನು ನೋಡಿದನು. ವೃತ್ರನು ಜಲಭೂತವನ್ನು ಹಿಡಿದಿದ್ದಾನೆ.

ಆಚಾರ್ಯನ ಅಪ್ಪಣೆಯಂತೆ ಇಂದ್ರನು ಆಪೋದೇವಿಯರನ್ನು ಪ್ರಾರ್ಥಿಸಿದನು. ಶುದ್ಧಜಲವು ಅರ್ಧಚಂದ್ರಮಂಡಲಾಕಾರವಾಗಿ ಕಾಣಿಸಿತು. ಪಂಚೀಕೃತ ಜಲಮಂಡಲವು ತನಗೆ ಏನೋ ರೋಗ ಬಂದಂತೆ ಒದ್ದಾಡುತ್ತಿದೆ. ಶುದ್ಧ ಜಲಮಂಡಲವು ಬೆಳ್ಳಗೆ ಬೆಳ್ಳಿಯ ಗುಂಡಿನಂತೆ ಮೆರೆಯಬೇಕಾಗಿದ್ದುದು