ಪೆಚ್ಚಾಗಿ ಏನೋ ಹಿಂಸೆಯಲ್ಲಿರುವಂತೆ ನಿಸ್ತೇಜವಾಗಿದೆ.ಅದರಲ್ಲಿರುವ ಪ್ರಧಾನ ಗುಣವಾದ ರಸವು ಕೆಟ್ಟುಹೋಗಿದೆ. ದೇವಗುರುವಿನ ಅಪ್ಪಣೆಯಂತೆ ದೇವರಾಜನು ಮತ್ತೆ ವೃತ್ರಾರ್ಥವಾಗಿ ವಜ್ರವನ್ನು ಪ್ರಯೋಗಿಸಿದನು. ಅಲ್ಲಿಯೂ ಮೊದಲಿನಂತೆ ಮಹಾಶಬ್ದವಾಯಿತು. ಲೋಕಲೋಕಗಳೆಲ್ಲವೂ ಸ್ವಸ್ಥಾನಗಳನ್ನು ಬಿಟ್ಟು ಚಲಿಸಿದವೋ ಎಂಬಂತಾಯಿತು. ಅಲ್ಲಿಯೂ ವೃತ್ರನ ಆವರವೊಂದು ಕಳಚಿ ಬಿತ್ತು. ವೃತ್ರನು ಇನ್ನೂ ಸಾಯಲಿಲ್ಲ. ಅಲ್ಲಿಂದಲೂ ನೆಗೆದು ಹೋದನು.
ಆಚಾರ್ಯನು ಶಚಿಯತ್ತ ತಿರುಗಿದನು. ಶಚಿಗೆ ಇನ್ನೂ ಜ್ಞಾನ ಬಂದಿಲ್ಲ. ಕಣ್ಣಿನಲ್ಲಿ ಇರುವ ತೇಜಸ್ಸಿಲ್ಲ. ಮಹಾಸೌಂದರ್ಯವತಿಯಾದ ಆಕೆಯ ರೂಪವು ನೋಡುತ್ತಿದ್ದಂತೆಯೇ ಕರಾಳವಾಗುತ್ತಿದೆ. ಎತ್ತೆತ್ತಲೋ ದೇಹವು ವಿಕಾರವಾಗುತ್ತಿದೆ. ಕೂಡಲೇ ಆಚಾರ್ಯನು ವೃತ್ರನೆಲ್ಲಿರುವನು ಎಂದು ಹುಡುಕಿ ನೋಡಿದನು. ವೃತ್ರನು ಅಗ್ನಿಭೂತವನ್ನು ಹಿಡಿದಿದ್ದಾನೆಯೆಂದು ತಿಳಿಯಿತು. ಇಂದ್ರನಿಗೆ ಅನುಸಂಧಾನ ಮಾಡಲು ಹೇಳಿದನು. ಕೆಂಪಗೆ ಮನೋಹರವಾಗಿ ತ್ರಿಕೋಣಾಕಾರವಾಗಿ ಶುದ್ಧ ತೇಜೋಮಂಡಲವೂ, ಪಂಚೀಕೃತ ತೇಜೋಮಂಡಲವೂ ಕಣ್ಣೆದುರಾಗಿ ನಿಂತುವು. ಆ ಶುದ್ಧ ಮಂಡಲದ ಮನೋಹರತೆಯು ಶುದ್ಧವಾಗಿಲ್ಲ. ಏನೋ ಆಗಿ ಅದು ತನ್ನ ಸ್ವರೂಪತೆಯನ್ನು ಕಳೆದುಕೊಳ್ಳುತ್ತಿದೆ. ಒಡಕು ಹರವಿಯಲ್ಲಿಟ್ಟಿರುವ ನೀರು ನೋಡುನೋಡುತ್ತಿದ್ದ ಹಾಗೆಯೇ ಸೋರಿ ಹೋಗುವಂತೆ ಆ ಮಂಡಲದ ಮನೋಹರತೆಯು ಹೋಗಿ ಭೀಕರತೆಯೂ ವಿಕಾರತೆಯೂ ಅಲ್ಲಿ ಮೂಡುತ್ತಿದೆ. ದೇವಪತಿಯು ಆಚಾರ್ಯನಿಂದ ಅಪ್ಪಣೆ ಪಡೆದು ಅಲ್ಲಿಯೂ ವೃತ್ರಾರ್ಥವಾಗಿ ಸಂಕಲ್ಪಪೂರ್ವಕವಾಗಿ ವಜ್ರವನ್ನು ಪ್ರಯೋಗಿಸಿದನು. ಮತ್ತದೆ ಹಿಂದಿನಂತೆಯೇ ಶಬ್ದ. ಈ ಸಲ ಇಂದ್ರನನ್ನು ಯಾರೋ ಒದ್ದಂತಾಯಿತು. ಇಂದ್ರನು ‘ಅಯ್ಯೋ’ ಎಂದು ಹಿಂದಕ್ಕೆ ಬಿದ್ದನು. ಶಚಿಯು ಪೂರ್ವದಂತಾದಳು.
ಕೂಡಲೇ ಆಚಾರ್ಯನು ಸಪ್ತರ್ಷಿಗಳಿಗೆ ನಮಸ್ಕಾರಮಾಡಿ, ಇಂದ್ರನನ್ನು ತೋರಿಸಿದನು. ಅವರು ಅಭಿಮಂತ್ರಿಸಿದರು. ಇಂದ್ರನು ಪ್ರಕೃತಿಸ್ಥನಾದನು. ಇತ್ತ ಅಗ್ನಿವಾಯುಗಳಿಗೂ ಆಚಾರ್ಯನಿಗೂ ರಕ್ಷಣೆಯನ್ನು ಕೊಟ್ಟು ಅವರು “ಆಚಾರ್ಯ, ಜಾಗ್ರತೆ ಮಾಡು, ವೃತ್ರನೆಲ್ಲಿ ಹೋದನೋ ನೋಡು. ನನಗಿನ್ನು ಅಧಿಕಾರವಿಲ್ಲವೆನ್ನಬೇಡ. ಅತ್ತ ನೋಡು. ಶಚೀದೇವಿಯ ಕಡೆ ದೃಷ್ಟಿಯಿರಲಿ” ಎಂದರು. ನೋಡಿದರೆ ಶಚೀದೇವಿಯ ಕೈಕಾಲುಗಳೂ ದೇಹವೂ ಸೊರಟಿಕೊಳ್ಳುತ್ತಿವೆ. ಅಗ್ನಿವಾಯುಗಳೂ ಗಾಬರಿಯಾಗುತ್ತಿದ್ದಾರೆ. ಸಪ್ತರ್ಷಿಗಳೂ ಖಿಲವಾದ ವೇದಮಂತ್ರಗಳನ್ನು ಮತ್ತೆ ಹಾಡುತ್ತಿದ್ದಾರೆ.