ಪುಟ:Mahakhshatriya.pdf/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಆಚಾರ್ಯನು ವೃತ್ರನು ವಾಯುಮಂಡಲವನ್ನು ಹಿಡಿದಿರುವುದನ್ನು ನೋಡಿದನು. ಇಂದ್ರನು ಆತನ ಅಪ್ಪಣೆಯಿಂದ ವಾಯುಭೂತವನ್ನು ಅನುಸಂಧಾನ ಮಾಡಿದನು. ದೀರ್ಘಚತುರಶ್ರಾಕಾರವಾದ ಶುದ್ಧವಾಯುಮಂಡಲವು ಅನುಭವ ಗೋಚರವಾಯಿತು. ಪಂಚೀಕೃತ ವಾಯುಮಂಡಲವು ದೃಗ್ಗೋಚರವಾಯಿತು. ಅಲ್ಲಿಯೂ ಎಲ್ಲವೂ ಸೊಟ್ಟಸೊಟ್ಟಾಗಿದೆ. ವಾಯುವಿನ ಪ್ರಧಾನಗುಣವಾದ ಚಲನೆಯೇ ನಿಂತಂತಾಗಿದೆ. ಆಚಾರ್ಯನ ಅಪ್ಪಣೆಯಂತೆ ಇಂದ್ರನು ಅಲ್ಲಿಯೂ ವೃತ್ರಾರ್ಥವಾಗಿ ವಜ್ರವನ್ನು ಪ್ರಯೋಗಿಸಿದನು. ಅಲ್ಲಿ ಮತ್ತೆ ಅದೇ ಶಬ್ದವಾಯಿತು. ಈ ಸಲವಂತೂ ಬ್ರಹ್ಮಾಂಡವೇನಾದರೂ ಒಡೆದುಹೋಯಿತೋ ಎನ್ನುವಷ್ಟು ಶಬ್ದ. ಸಪ್ತರ್ಷಿಗಳ ಅನಗ್ರಹದಿಂದ ಉಳಿದವರೆಲ್ಲರೂ ಉಳಿದರು. ಶಚಿಯು ಪ್ರಕೃತಿಸ್ಥಳಾದಳು.

ಸಪ್ತರ್ಷಿಪ್ರಚೋದಿತನಾದ ಆಚಾರ್ಯನು ವೃತ್ರನನ್ನು ಅನುಸಂಧಾನ ಮಾಡಿದನು. ಇಂದ್ರನು ವಜ್ರವನ್ನು ಹಿಡಿಯಲು ಅಶಕ್ತನಾಗಿದ್ದಾನೆ. ಎಲ್ಲವೂ ಹೂ ಅರಳಿದಂತೆ ಅರಳುತ್ತಿದೆ. ಶಚಿಯು ಬೆಂಕಿಯ ಸಂಬಂಧವಿಲ್ಲದೆ ಅರಳಾಗುವ ಭತ್ತದಂತೆ ಅರಳುತ್ತಿದ್ದಾಳೆ. ಅಗ್ನಿವಾಯುಗಳೂ ಅರಳುತ್ತಿದ್ದಾರೆ. ಆಚಾರ್ಯನು ಸಪ್ತರ್ಷಿಗಳನ್ನು ಮುಂದಿಟ್ಟುಕೊಂಡು, ಇಂದ್ರನಿಗೆ ಶಕ್ತಿಪ್ರಧಾನಮಾಡಿ, “ಹೂಂ, ಹೊಡೆ” ಎನ್ನುತ್ತಾನೆ. ಇಂದ್ರನು ಬಹು ಕಷ್ಟದಿಂದ ವಜ್ರವನ್ನು ಈ ಸಲವೂ ಪ್ರಯೋಗಿಸುತ್ತಾನೆ. ಈ ಸಲವೂ ವಜ್ರದ ಏಟಿಗೆ ಸಿಕ್ಕಿದರೂ ವೃತ್ರನು ಹತನಾಗದೆ, ಇಂದ್ರನ ಮೇಲೆಯೇ ಬೀಳುತ್ತಾನೆ. ಆ ಆಘಾತಕ್ಕೆ ಇಂದ್ರನು ಕೆಳಗೆ ಬೀಳುತ್ತಾನೆ. ‘ಅಯ್ಯೋ’ ಎಂದು ಅಳಲು ಮೊದಲುಮಾಡುತ್ತಾನೆ. ಏಕೆ ಎನ್ನುವುದನ್ನೇ ತಿಳಿಯದೆ ಅಗ್ನಿವಾಯುಗಳೂ ಅಳುತ್ತಾರೆ. ಶಚಿಗೆ ಎಚ್ಚರವಾಗಿದೆ. ಆಕೆಯೂ ಅಳುತ್ತಾಳೆ. ಆಚಾರ್ಯನಿಗೂ ಅಳು ಬರುತ್ತಿದೆ.

ಸಪ್ತರ್ಷಿಗಳು ತಮ್ಮ ಪ್ರಭಾವವನ್ನು ತೋರಿಸಿದರು. ತಮ್ಮಲ್ಲೆಲ್ಲ ಶ್ರೇಷ್ಠನಾದ ವಸಿಷ್ಠನನ್ನು ಸಂಬೋಧಿಸಿ, “ವಿಪ್ರೇಂದ್ರ, ಇದು ನಿನ್ನ ಸರದಿ. ವೃತ್ರನು ಇಂದ್ರನ ಅಹಂಕಾರವನ್ನು ಹಿಡಿದಿದ್ದಾನೆ. ಇದು ಶುಕ್ರಾಚಾರ್ಯನ ಸಂಜೀವಿನೀ ವಿದ್ಯೆಯ ಬಲ. ಇದನ್ನು ಅಹಂಕಾರವನ್ನು ಗೆದ್ದ ನೀನಲ್ಲದೆ, ಇನ್ನು ಯಾರೂ ಸರಿಮಾಡಲಾರರು. ಕೃಪೆಮಾಡು” ಎನ್ನುತ್ತಾರೆ. ಆತನು ನಸುನಕ್ಕು ರಥಂತರ ಸಾಮವನ್ನು ಹಾಡುತ್ತಾನೆ. ಮಿಕ್ಕವರೂ ಆತನನ್ನು ಅನುಸರಿಸಿ ಸಾಮಗಾನ ಮಾಡುತ್ತಾರೆ. ಅವರು ಸಾಮಗಾನ ಮಾಡಿದಂತೆಲ್ಲ ಇಂದ್ರನನ್ನು ಹಿಡಿದಿದ್ದ ವೃತ್ರನು ಕ್ರಮಕ್ರಮವಾಗಿ ಈಚೆಗೆ ಬರುತ್ತಾನೆ. “ನಾನು ಈ ಸಾಮವನ್ನು ಸಹಿಸಲಾರೆ.