ಪುಟ:Mahakhshatriya.pdf/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನಿಲ್ಲಿಸಿ, ನೀವು ಹೇಳಿದಂತೆ ಕೇಳುತ್ತೇನೆ. ನಿಲ್ಲಿಸಿ, ನಿಲ್ಲಿಸಿ” ಎಂದು ಅಂಗಲಾಚುತ್ತಾನೆ. ಇಂದ್ರನು ಸ್ವಸ್ಥನಾಗುವವರೆಗೂ ಸಾಮಗಾನ ಮಾಡಿ ಸಪ್ತರ್ಷಿಗಳು ನಿಲ್ಲಿಸುತ್ತಾರೆ.

ಆ ವೇಳೆಗೆ ಅ ಸಾಮಗಾನಪ್ರಭಾವದಿಂದ ಮೂರ್ಛಿತನಾಗಿದ್ದ ವೃತ್ರನು ಮೆತ್ತಗೆ ಚೇತರಿಸಿಕೊಂಡು ಎದ್ದು ಸಪ್ತರ್ಷಿಗಳಿಗೆ ನಮಸ್ಕಾರಮಾಡಿ “ನನಗೊಂದು ವರವನ್ನು ಕೊಡಬೇಕು” ಎಂದು ಯಾಚಿಸುತ್ತಾನೆ. ಅವರು ‘ಆಗಬಹುದು’ ಎನ್ನಲು, ಅವನು “ನನಗಿನ್ನೂ ಆಯುಸ್ಸಿದೆ. ಅದು ಕಳೆಯುವವರೆಗೂ ಇಂದ್ರನನ್ನು ಮಾತ್ರ ಪೀಡಿಸುತ್ತೇನೆ. ನನಗೆ ಅಪ್ಪಣೆ ಕೊಡಬೇಕು” ಎನ್ನುತ್ತಾನೆ. ಸಪ್ತರ್ಷಿಗಳು ‘ಆಗಬಹುದು’ ಎನ್ನುತ್ತಾರೆ. ವೃತ್ರನು ಅಂತರ್ಧಾನನಾಗುತ್ತಾನೆ. ಇಂದ್ರನು “ಅಯ್ಯೋ! ಹತ್ಯೆ ! ಹತ್ಯೆ” ಎಂದು ಓಡಿಹೋಗುತ್ತಾನೆ. ಆಚಾರ್ಯನೂ ಅಗ್ನಿವಾಯುಗಳು ಶಚಿಯೂ ಕೂಗುತ್ತಿದ್ದರೂ ನಿಲ್ಲದೆ ಓಡುತ್ತಾನೆ. ಎತ್ತಹೋದನೋ ತಿಳಿಯದೆ ಎಲ್ಲರೂ ವ್ಯಥಿಸುತ್ತಾರೆ.

* * * *