ಪುಟ:Mahakhshatriya.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಂದು ಪಾಲು. ಆದ್ದರಿಂದ, ಈತನು ಕುಟುಂಬದಲ್ಲಿ ಪಿಂಡಭಾಗಿಯಾಗಬಹುದೇ ಹೊರತು ದಾಯಭಾಗಿಯಾಗಲು ಅರ್ಹನಲ್ಲ. ಅಲ್ಲದೆ, ಇನ್ನೂ ಒಂದು ಮಾತು. ಅವಿಶ್ವಾಸ, ಅಶ್ರದ್ಧೆ, ಅಭಕ್ತಿ ಎಂಬುದು ಕುರುಡು, ಕಿವುಡು, ಹೆಳವುಗಳಂತೆ ಒಂದು ವ್ಯಾಧಿ. ಅದನ್ನು ಶಾಸ್ತ್ರಾಧ್ಯಯನ, ವೃದ್ಧೋಪಸೇವೆಗಳಿಂದ ನಿವಾರಿಸಿಕೊಳ್ಳಲು ಸಾಧ್ಯ. ಅವನ್ನೂ ಈತನು ಮಾಡಿಲ್ಲ. ಅದರಿಂದ ಈತನು ದಾಯಭಾಗಕ್ಕೆ ಅರ್ಹನಲ್ಲ.”

ವಾದಿಯು ಅರಿಕೆ ಮಾಡಿದನು : “ದೇವ, ಯಾರೂ ನನಗೆ ಹೇಳಿಕೊಡಲಿಲ್ಲ.”

ಅರಸನು ದೃಢವಾಗಿ ಗುಡುಗಿನಂತೆ ಮೊಳಗುವ ಕಂಠದಲ್ಲಿ ಹೇಳಿದನು: “ಅದು ಸರಿಯಲ್ಲ. ನೀನು ಧರ್ಮವನ್ನು ಅರಸಿಕೊಂಡು ಹೋಗಬೇಕು. ಪುರುಷನು ಅರ್ಥಕಾಮಗಳ ಸಂಪಾದನೆಗೆ ತಾನಾಗಿ ಸಹಜವಾಗಿ ತೊಡಗುವಂತೆ, ಧರ್ಮಕ್ಕಾಗಿ ಪ್ರಯತ್ನಪುರಸ್ಸರವಾಗಿ ತೊಡಗಬೇಕು. ಇಂದ್ರಿಯಾರ್ಥಗಳನ್ನು ಸಾಧಿಸುವಂತೆ ಅದನ್ನು ಸಾಧಿಸಬೇಕು. ಅಭ್ಯಾಸಮಾಡಬೇಕು. ವೃದ್ಧರನ್ನು ಸೇವಿಸಿ ತಿಳಿಯಬೇಕು. ಅಧ್ಯಯನ, ಶ್ರವಣ, ಮನನಗಳಿಂದ ಧರ್ಮವನ್ನು ಒಲಿಸಿಕೊಳ್ಳಬೇಕು. ಹಾಗೆ ಮಾಡಲೆಂದೇ ಪ್ರೇಯೋವಿಚಾರಕ್ಕಿಂತ ಶ್ರೇಯೋವಿಚಾರವನ್ನು ಹೆಚ್ಚಾಗಿ ಗೌರವಿಸುವನೆಂದೇ ಬ್ರಾಹ್ಮಣನಿಗೆ ಸಮಾಜವು ಗೌರವದ ಅಗ್ರಸ್ಥಾನವನ್ನು ಕೊಟ್ಟಿರುವುದು. ನೀನು ಹಾಗೆ ಮಾಡದೆ ಹೋದರೆ, ನಿನಗೆ ಅಗ್ರಜನ ಸ್ಥಾನಮಾನಗಳು ಸಲ್ಲುವುದಿಲ್ಲ. ಆಯಿತು ನೀನು ಈಗ ಈ ಆಸ್ತಿಯನ್ನು ತೆಗೆದುಕೊಂಡು ಏನು ಮಾಡುವೆ ?”

“ಕುಟುಂಬಿಯಾಗಿ ಸುಖಜೀವನ ಮಾಡುವೆನು.”

“ಹಾಗೆಂದರೆ ಪಶುಜೀವನ ಮಾಡುತ್ತ ಸೋಮಾರಿಯಾಗಿರುವೆನೆಂದಾಯಿತು. ಪುರುಷಧರ್ಮವು ಯಾವಾಗಲೂ ಧರ್ಮಕರ್ಮಪ್ರಧಾನವು. ನೀನು ಅದನ್ನು ಬೇಡ ಎನ್ನುವೆ. ನಮ್ಮ ರಾಜ್ಯದಲ್ಲಿ ಧರ್ಮಾರ್ಥಗಳನ್ನು ಅಭಿವೃದ್ಧಿ ಮಾಡುವವರಿಗೆ ಮಾತ್ರ ಸ್ಥಾನವು. ಅದರಿಂದ ನೀನು ಈ ಎರಡರಲ್ಲಿ ಒಂದನ್ನು ಹಿಡಿಯಬೇಕು. ಇಲ್ಲವಾದರೆ ಪಿಂಡಭಾಗಿಯಾಗಿ ಅವಿಭಕ್ತ ಕುಟುಂಬದಲ್ಲಿ ಬಿದ್ದಿರಬೇಕು. ಅದರಿಂದ ನನ್ನ ಮಾತು ಕೇಳು. ನೀನು ಜಾತ್ಯಾ ಬ್ರಾಹ್ಮಣನು. ನಿನ್ನ ಮನೋಬುದ್ಧಿ ಅಹಂಕಾರಗಳು ಸಂಸ್ಕಾರ ಸಂಪನ್ನವಾದರೆ ಧರ್ಮದ ಕಡೆಗೆ ನುಗ್ಗುವವು. ಅರ್ಥಾರ್ಜನಕ್ಕೆ ನಿನಗೆ ಶಕ್ತಿಸಾಲದು ಅದರಿಂದ ನೀನು ಪ್ರಾಯಶ್ಚಿತ್ತ ಮಾಡಿಕೊಂಡು ಸಂಸ್ಕಾರಸಂಪನ್ನರಾಗಿ ಬರುವ ವರ್ಷಕ್ಕೆ ಬಾ. ಅಥವಾ ನ್ಯಾಯ ನಿರ್ಣಯವನ್ನು ಒಪ್ಪಿಕೊ.”