ಪುಟ:Mahakhshatriya.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ದೇವ ಸಂಸ್ಕಾರಗಳಿಂದ ನನಗೆ ಉಪಯೋಗವಾಗುವುದು ಎಂಬುದನ್ನು ಅರಿಯಿಸಿಕೊಡಬೇಡವೇ ?”

ಚಕ್ರವರ್ತಿಗೆ ಭಗವಾನರ ಮಾತು ನೆನಪಿಗೆ ಬಂತು : ಸವಿಚಾರವಾಗಿ ಎದುರು ಕಡೆಯವರು ಒಪ್ಪುವಂತೆ ಧರ್ಮವನ್ನು ನಿರೂಪಿಸಬೇಕು. ಆದರೆ ತಾನು ಕುಳಿತಿರುವುದು ವಿಚಾರವೇದಿಕೆಯಲ್ಲ : ವಿಧಿವೇದಿಕೆ. ಏನು ಮಾಡಬೇಕು? ಅರಸನು ಒಂದು ಗಳಿಗೆ ಯೋಚಿಸಿ ರಾಜಪುರೋಹಿತರ ಮುಖವನ್ನು ನೋಡಿದನು.

ಆತನು ಎದ್ದು ನಿಂತು ಧರ್ಮಾಸನಕ್ಕೆ ಕೈಮುಗಿದು ಹೇಳಿದನು : “ಧರ್ಮಕ್ಕೆ ಜಯವಾಗಲಿ. ರಾಜಾಜ್ಞೆಯಂತೆ ವಿಧಿವೇದಿಕೆಯ ಮುಂದೆ ವಿಚಾರವನ್ನು ಮಂಡಿಸುತ್ತಿದ್ದೇನೆ. ಮನುಷ್ಯನಿಗೆ ಸ್ಥೂಲ, ಸೂಕ್ಷ್ಮ, ಕಾರಣಗಳೆಂದು ಮೂರು ದೇಹಗಳು. ಸ್ಥೂಲದೇಹಕ್ಕೆ ಬರುವ ರೋಗರುಜಿನಗಳನ್ನು ನಿವಾರಿಸಲು ಆಯುರ್ವೇದವು ಔಷಧ, ಪಂಥ್ಯ, ಅನುಪಾನಗಳನ್ನು ಹೇಳುವುದು. ಅದರಂತೆಯೇ ಸೂಕ್ಷ್ಮದೇಹವಾದ ಮನೋಬುದ್ಧಿ ಅಹಂಕಾರಗಳಿಗೆ ಬರುವ ರೋಗರುಜಿನಗಳನ್ನು ನಿವಾರಿಸಿಕೊಳ್ಳಲು ಶ್ರುತೀ ಭಗವತಿಯು ಸಂಸ್ಕಾರಗಳನ್ನು ಅಪ್ಪಣೆಕೊಡಿಸಿರುವಳು. ಇದನ್ನು ಆಂತರಿಕವಾಗಿ ಬಾಹ್ಯವಾಗಿ ತಿಳಿದುಕೊಳ್ಳುವ ಸಾಧನೆಗಳನ್ನು ಯೋಗಶಾಸ್ತ್ರವು ನಿರೂಪಿಸಿರುವುದು. ಲೋಕದಲ್ಲಿ ಪ್ರತಿಯೊಂದು ಸಿದ್ಧಿಯೂ ಜನ್ಮ ಮಣಿ, ಮಂತ್ರ, ಔಷಧಗಳಿಂದ ಸಾಧ್ಯವು. ಪಕ್ಷಿಗಳು ಪಕ್ಷಿಗಳಾಗಿ ಹುಟ್ಟಿದ ಮಾತ್ರದಿಂದಲೇ ಆಕಾಶದಲ್ಲಿ ಹಾರಾಡುವುವು. ಮೀನುಗಳೂ ಹುಟ್ಟುತ್ತಿದ್ದಂತೆಯೇ ಈಜು ಕಲಿತಿರುವುವು. ಇವು ಜನ್ಮಸಿದ್ಧಿಗಳು. ಔಷಧಸೇವನದಿಂದ ಗುಣದೋಷಗಳು ಉಂಟಾಗುವುದು ಅನುಭವಸಿದ್ಧವು. ಇವೆರಡನ್ನೂ ಕಂಡವರು ಮಣಿಮಂತ್ರಗಳೂ ಹೀಗೆಯೇ ಸಿದ್ಧಿಪ್ರದಗಳೆಂದು ತಿಳಿದುಕೊಳ್ಳಬಹುದು : ಅಥವಾ ಬೇಕೆಂದರೆ ಅದಕ್ಕಾಗಿ ಪ್ರಯತ್ನಿಸಿ ಪ್ರತ್ಯಕ್ಷವಾಗಿ ಕಂಡುಕೊಳ್ಳಬಹುದು : ಆದರೂ ಮಣಿ, ಔಷಧಗಳು ಜಡಗಳು, ಅದರಿಂದ ಪುರುಷ ಪ್ರಯತ್ನಾಂತರವಿಲ್ಲದೆ ಸಿದ್ಧಿಯನ್ನು ಕೊಡುವುವು. ಆದರೆ ಮಂತ್ರಗಳು ಹಾಗಲ್ಲ, ಮಂತ್ರವು ತತ್ಸಿದ್ಧನಾದವನಿಂದ ಬರುವ ಶಕ್ತಿವಾಹಿನಿಯು. ಅದನ್ನು ಗುರುವು ಅನುಗ್ರಹಿಸಿದ ಬೀಜಶಕ್ತಿಯನ್ನು ಮಹಾವೃಕ್ಷವಾಗಿ ಬೆಳೆಸಿಕೊಳ್ಳುವುದು ಶಿಷ್ಯನ ಕೈಯಲ್ಲಿರುವುದು ಆದ್ದರಿಂದಲೇ, ಬೀಜಶಕ್ತಿಯನ್ನು ಕೊಡುವನೆಂದೇ ಮಂತ್ರಪ್ರದನನ್ನು ತಂದೆ ಎಂದು ಆತನ ಋಣವನ್ನು ಒಪ್ಪಿಕೊಳ್ಳುವುದು. ಮಂತ್ರವೆನ್ನುವುದು ಮನನದಿಂದ ಪ್ರಕಟವಾಗುವ ಶಕ್ತಿಸಂಪುಟವು. ಮಂತ್ರವು ನದಿಯ ನೀರನ್ನು ತಂದೊದಗಿಸುವ ಕಾಲುವೆಯೂ