ಪುಟ:Mahakhshatriya.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೌದು. ಕಾಲಾಂತರದಲ್ಲಿ ತಾನೇ ನದಿಯೂ ಆಗಬಲ್ಲುದು. ಇದಿಷ್ಟೂ ವಿಚಾರವೇದಿಕೆಯು. ಇನ್ನು ಕ್ರಿಯಾವೇದಿಕೆಯ ವಿಚಾರ. ಬೇಕೆಂದರೆ ಅನುಭವಿಸುವುದಕ್ಕೆ ಸಿದ್ಧನಾಗಬೇಕು. ಇಷ್ಟವಿದ್ದರೆ ಅದೂ ಕೂಡ ಆಗಬಹುದು.”

“ದೇವ, ಇದಿಷ್ಟೂ ಮಾಯೆಯಲ್ಲ ಎನ್ನುವುದು ಹೇಗೆ ?”

“ಈ ಪ್ರಶ್ನವೇ ಅತಿಪ್ರಶ್ನವು. ಅಶ್ರದ್ಧಾಜಾಡ್ಯದಿಂದ ಬೆಳೆದ ಸಂಶಯವೆಂಬ ವಿಷಬೀಜದ ವೃಕ್ಷಸ್ವರೂಪವು ಇದು. ಆದರೂ ಉತ್ತರ ಕೊಡೋಣ. ಮಾಯೆಯೆಂಬುದು ವಸ್ತುತಂತ್ರವಾದರೆ ಕ್ಷಣಕ್ಕೊಂದು ರೂಪವನ್ನು ತಾಳುತ್ತ ನಿಯತ ರೂಪವಿಲ್ಲದೆ ಪ್ರತಿಭಾಸವಾಗುವುದು. ಸತ್ಯವು ತೋರಿದ ಕ್ಷಣದಲ್ಲಿ ಅಡಗುವುದು ಅದು. ಪುರುಷತಂತ್ರವಾದರೆ, ಮಾಯಿಕನ ಬಲವಿರುವವರೆಗು ಇದ್ದು ಅಡಗುವುದು. ಮಂತ್ರವು ಹಾಗಲ್ಲ. ಸತ್ಯಾರ್ಥದರ್ಶನಕ್ಕಾಗಿಯೇ ಜನ್ಮವೆತ್ತಿರುವುದು. ಪುರುಷತಂತ್ರವಾಗಿ ಒಬ್ಬರಿಂದ ಒಬ್ಬರಿಗೆ ಬಂದರೂ, ವಸ್ತುತಂತ್ರವಾಗಿ ಬೆಳೆಸಿದಷ್ಟು ಬೆಳೆದರೂ, ಸತ್ಯಾರ್ಥದರ್ಶನ ಮಾಡಿಸಿಯೂ ಇನ್ನೂ ಇರುವುದಾಗಿ, ನಾಶಗಳಲ್ಲಿ ಯಾವುದೊಂದಕ್ಕೂ ವಶವಾಗುವುದಿಲ್ಲವಾಗಿ, ಮಂತ್ರವು ಮಾಯೆಯಲ್ಲ.”

“ಇದು ಬೇಡ ಎನ್ನುವುದಕ್ಕೆ ನನಗೆ ಅಧಿಕಾರವುಂಟೋ ? ಇಲ್ಲವೋ ?”

“ಆ ಅಧಿಕಾರವು ನೀನು ಸಂಪಾದಿಸಿಕೊಂಡರೆ ಉಂಟು. ಇಲ್ಲದಿದ್ದರೆ ಇಲ್ಲ. ನಿನಗೆ ಜನ್ಮತಃ ಬಂದಿರುವ ಅಧಿಕಾರ ನಿನ್ನ ತಂದೆಯ ಮಗನೆಂದು ಬಂದ ಅಧಿಕಾರ. ಈ ಅಧಿಕಾರವೆನ್ನುವುದು ಕಾಲುವೆಯ ಹಾಗೆ, ನಿನ್ನ ಜನ್ಮಬಲದಿಂದ ನಿನಗೆ ಬಂದ ಅಧಿಕಾರ ತೋಡಿದ ಕಾಲುವೆಯ ಹಾಗೆ. ಅದರಲ್ಲಿ ನೀರು ಹರಿಯಬೇಕಾದರೆ ನಿನ್ನ ಪ್ರಯತ್ನದಿಂದ ಆಗಬೇಕು. ನೀರು ಬಂದರೂ ಅದು ಕಾಲುವೆಯ ಎರಡು ದಡಗಳ ನಡುವೆ. ಕಾಲುವೆಯ ಆಳ, ಅಗಲಗಳಿಗೆ ತಕ್ಕಷ್ಟು ಮಾತ್ರ ಹರಿಯುವಂತೆ, ಆ ಅಧಿಕಾರವು ಜನ್ಮಸಿದ್ಧವಾದ ವರ್ಣಧರ್ಮ, ದೇಶಕಾಲಧರ್ಮಗಳೆಂಬ ಎರಡು ದಡಗಳ ನಡುವೆ ಹರಿಯುವುದು. ಅದನ್ನು ಬಿಟ್ಟು ನಿನಗೆ ಅಧಿಕಾರವೇ ಇಲ್ಲ.”

“ದಯವಿಟ್ಟು ನನಗೆ ಅದನ್ನು ವಿವರಿಸಿ ಹೇಳುವಿರಾ ?

“ನೀನು ವಿನಯದಿಂದ ಕೇಳಿರುವೆಯಾಗಿ ನಿನಗೆ ಹೇಳಬೇಕು. ಧರ್ಮಕಾಮನಲ್ಲದವನಿಗೆ ಈ ವಿಷಯವು ಬರುವುದಿಲ್ಲ. ನೀನು ಅಜ್ಞಾನದಿಂದ ಧರ್ಮವನ್ನು ತಿರಸ್ಕರಿಸಿರುವೆಯೆಂದು ಈ ವಿಷಯವು ಹೇಳುವುದಾಗಿ, ನಿನಗೆ ಹೇಳಬೇಕು, ಕೇಳು. ಸಮಾಜವು ಸೋಪಾನಪಂಕ್ತಿಯಂತೆ, ಗೋಪುದರಂತೆ