ಪುಟ:Mahakhshatriya.pdf/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಒಂದು ಕೋಟಿಯಷ್ಟಾದೀತು, ಮಹಾಸ್ವಾಮಿ”

“ಅವರಿಬ್ಬರೂ ಕುಲಧರ್ಮವನ್ನು ಕಾಪಾಡಿಕೊಂಡು ಬರುತ್ತಿರುವರೋ?”

“ಹೌದು, ಮಹಾಸ್ವಾಮಿ.”

“ಪ್ರತಿಯೊಬ್ಬನ ಆಸ್ತಿಯ ಮೇಲೆ ರಾಜ್ಯಾಧಿಕಾರಿಗೆ ಅಧಿಕಾರವುಂಟು. ಆಯಾ ಕುಟುಂಬದವರು ಅದನ್ನು ಅನುಭವಿಸಿಕೊಂಡು ಬರುತ್ತಿರುವುದು ಕುಲಧರ್ಮವನ್ನು ಪಾಲಿಸುವೆನೆಂದು ಒಪ್ಪಿಕೊಂಡಿರುವುದರಿಂದ. ದೇವರಕ್ಷಕನಾದ ಅರಸನು ಧರ್ಮರಕ್ಷಕನೂ ಹೌದು. ಅದರಿಂದ, ಕುಲಧರ್ಮದಂತೆ ನಡೆಯುತ್ತಿರುವವರ ಆಸ್ತಿಯನ್ನೂ ಕುಲವನ್ನೂ, ದೇಶವನ್ನೂ ತ್ಯಜಿಸಿ, ಆಸ್ತಿಯ ಲೋಭ, ಸ್ತ್ರೀವ್ಯಾಮೋಹಗಳಿಂದ ದೇಶಾಂತರಕ್ಕೆ ಹೋಗಬೇಕೆಂದಿರುವವನಿಗೆ ಕೊಡಿಸಲು ಶಕ್ತನಲ್ಲ. ಅದರಿಂದ, ಈಗ ನೀನು ಇರುವ ರೀತಿಯಲ್ಲಿ ಒಂದು ವರ್ಷಕಾಲ ಇರಲು ಬೇಕಾಗುವ ಧನವನ್ನು ನಿನಗೆ ಕೊಡಬೇಕೆಂಬ ನ್ಯಾಯಾಸ್ಥಾನದ ನಿರ್ಣಯವು ಸರಿ. ಜೊತೆಗೆ, ನೀನು ಇಲ್ಲಿಂದ ನಿನ್ನ ಉದ್ದಿಷ್ಟ ಸ್ಥಳಕ್ಕೆ ಹೋಗಲು ನಿನ್ನ ಯೋಗ್ಯತೆಗೆ ತಕ್ಕಂತೆ ಆಗುವ ಹಾದಿಯ ವೆಚ್ಚವನ್ನು ಕೊಡಿಸಲಾಗುವುದು. ಇಲ್ಲಿ ಆಸ್ತಿಯ ಮೇಲೆ ನಿನಗಾಗಲಿ ನಿನ್ನ ಸಂತಾನಕ್ಕಾಗಲಿ ಏನೂ ಅಧಿಕಾರವಿಲ್ಲವೆಂಬ ಬಂಧ ವಿಮೋಚನೆಯ ಪತ್ರವನ್ನು ಬರೆದುಕೊಡತಕ್ಕದ್ದು.”

ಹೀಗೆಂದು ರಾಜನು ಧರ್ಮಾಧಿಕಾರಿ, ಪುರೋಹಿತ, ಗುರುಗಳ ಮುಖವನ್ನು ನೋಡಿದನು. ಅವರೆಲ್ಲರೂ ಸರಿಯೆಂದು ಅಂಗೀಕಾರವನ್ನು ಸೂಚಿಸಿದರು. ವಾದಿಯು ನಿರುತ್ತರನಾಗಿ ನ್ಯಾಯಪೀಠಕ್ಕೆ ಕೈಮುಗಿದು ಹೊರಟುಹೋದನು.

ಮೂರನೆಯವರನು ಬಂದನು. ಅವನು ಅಪರಾಧಿ : ವಾದಿಯಲ್ಲ. ಅದರಿಂದ ಧರ್ಮಾಧಿಕಾರಿಯು ಅವನ ಮೇಲಿದ್ದ ಆರೋಪಗಳನ್ನು ಹೇಳಿದನು : “ಮಹಾ ಸ್ವಾಮಿ, ಈತನು ದುಷ್ಟಕ್ಷತ್ರಿಯ, ತನ್ನ ರಾಜ್ಯದಲ್ಲಿ ಸರಿಯಾಗಿದ್ದರೂ ನೆರೆ ಹೊರೆಯ ರಾಜ್ಯಗಳಲ್ಲಿ ಹಾವಳಿ ಮಾಡುತ್ತಿದ್ದಾನೆಂದು, ಸಾರ್ವಭೌಮರ ಆಜ್ಞೆಯನ್ನು ನಿರಾಕರಿಸಿದ್ದಾನೆಂದು ದಂಡ್ಯನಾಗಿದ್ದಾನೆ.”

ಅರಸನು ಅಪರಾಧಿಯ ಮುಖವನ್ನು ನೋಡಿದನು. ಒಳ್ಳೆಯ ತೇಜಸ್ಸಿ, ದೃಢಾಂಗ, ನಯವಿನಯ ಭಯಭಕ್ತಿಗಳಿಂದ ನಿಂತಿದ್ದಾನೆ. ಒಂದು ಗಳಿಗೆ ಯೋಚಿಸಿ, ಅರಸನು ಕೇಳಿದನು ; “ನೀನು ಏನು ಹೇಳುವೆ ?”

ಅವನು ವಿನಯವನ್ನು ಬಿಡದೆ ತೇಜೋವೃದ್ಧನನ್ನು ಕಂಡಾಗ ಸಹಜವಾಗಿ ಬರುವ ಭಯಭಕ್ತಿಗಳನ್ನು ಅಂಗಾಂಗಳೆಲ್ಲವೂ ಪ್ರದರ್ಶಿಸುತ್ತಿದ್ದರೂ, ತನ್ನ ತೇಜಸ್ಸನ್ನು ಮರೆಯದವನ ಗರ್ವವನ್ನೂ ಬಿಡಲಾರದೆ, ಕೈಮುಗಿದುಕೊಂಡು ಹೇಳಿದನು :