ಬೇಕೆಂದು ಇಲ್ಲದ ಭಾವವನ್ನು ಬೆಳೆಸಿಕೊಂಡು, ಇನ್ನೊಬ್ಬರು ಬರೆದ ಮಾತು ಕಲಿತು ಆಡುವುದು. ಸಂಸ್ಕೃತರಾದ ನಮಗೆ ಭಾವವು ಸಹಜವಾಗಿ ಬೆಳೆದು ಬಲಿತು ಸಮಾಧಿಯಾಗಿ, ಭಾವಾವೇಶದಿಂದ ಮಾತುಗಳೂ ಸಂಸ್ಕಾರಸಂಪನ್ನಳಾಗಿ, ನೀನು ಧರಿಸಿರುವ ಆಭರಣಗಳಲ್ಲಿರುವ ಶಾಣೋಲ್ಲೀಢ ಜೀವರತ್ನಗಳಂತೆ ತೇಜಃಪುಂಜಗಳಾಗಿ ಹೊರಬಂದರೆ ಇವು ನಾಟಕದ ಮಾತುಗಳೆನ್ನುವುದು ಯಾವ ನ್ಯಾಯ? ಸಂಗೀತದಲ್ಲಿ ಚೆನ್ನಾಗಿ ನುರಿತಿರುವ ನಿನ್ನ ಕಂಠವು ಶ್ರುತಿಗೆ ದ್ರೋಹಮಾಡದೆ ನುಡಿಯುತ್ತಿದ್ದರೆ ಅಲ್ಪಾಭರಣಗಳನ್ನು ಧರಿಸಿ, ಲಘುವಸ್ತ್ರದಿಂದ ಬಂದಿರುವೆಯೆಂದರೆ ನಿನಗೆ ವಸ್ತ್ರಾಭರಣಗಳು ಬೇಕಾದಷ್ಟು ಇಲ್ಲವೆಂದು ಅರ್ಥವೇ? ಒಂದೇ ನದಿಯು ಕಟ್ಟೆಯ ಹಿಂದೆ ನಿಂತು ಘನವಾಗಿದ್ದರೂ ಧುಮುಕುವಾಗ ಭೋರ್ಗರೆದರೆ ಅದು ನಾಟಕವೇ? ಈಗ ಈ ಸಮಯದಲ್ಲಿ ನಾನಿಷ್ಟು ಮಾತನಾಡುತ್ತಿರುವುದೂ ಭಾವಶಬಲತೆಯಿಂದಲೇ ಅಲ್ಲವೇ! ಅದರಿಂದ ನಾನಾಡುವ ಮಾತು ನಾಟಕದ್ದಲ್ಲ. ನಾಟಕದಲ್ಲಿ ಅರ್ಥಕ್ರಿಯೆಯಿಲ್ಲದೆ ಭಾವಪ್ರಚೋದಕ ಮಾತ್ರವಾದ್ದರಿಂದ ವಾಕ್ಕು ಅಲ್ಲಿ ವಿಡಂಬನವು. ಅದರಲ್ಲಿ ತೃಪ್ತಾ ಆಗಿ, ತರ್ಪಯಂತೀ ಆಗಿ, ವಶ್ಯಳಾಗಿ, ವಶೇ(ಹೆಣ್ಣಾನೆ)ಯಂತೆ ಲೋಲೆಯಾಗಿ, ಲೀಲಾಪರಳಾದ ನಿನ್ನಂತಹ ಸುರಸುಂದರಿಯ ಸಮ್ಮುಖದಲ್ಲಿ ವಿಡಂಬನವಾಕ್ಕಿಗೆ ಪ್ರಯೋಜನವೆಲ್ಲಿ? ಅದರಿಂದ ಬಾ. ಕಾರ್ಯಪರರಾಗಿ ಸಂತೋಷವನ್ನು ಅರ್ಜಿಸುವ ಕಾಲವಿದು. ಕಾಮದೇವನ ಆರಾಧನದಿಂದ ಕೃತಾರ್ಥರಾಗುವ ಕಾಲವಿದು. ಬರಿಯ ಮಾತಿನ ಬೆಡಗಿನಲ್ಲಿ ಕಾಲಹರಣವೇಕೆ?”
“ದೇವ, ತಮ್ಮ ಮಾತುಗಳು ನನ್ನ ಕಿವಿಗೆ ರಸಾಯನವಾಗಿವೆ. ತಮ್ಮೊಡನೆ ಸಿಂಹಾಸನದಲ್ಲಿ ಕುಳಿತಾಗ ಆ ವೈಭವವನ್ನು ನೋಡಿ ಮನಸ್ಸು ತಣಿಯುವಂತೆ ಧರ್ಮಾಸನದಲ್ಲಿ ಕುಳಿತಾಗ ಕ್ಲಿಷ್ಟವೂ, ಸಂದಿಗ್ಧವೂ, ದುರಾರಾಧ್ಯವೂ ಆದ ಧರ್ಮಸ್ಕಂಧಗಳನ್ನು ವಿವರಣಮಾಡಿ ನಿರ್ಣಯಕ್ಕೆ ಬರುವ ಚಾತುರ್ಯವನ್ನು ನೋಡಿ ಬುದ್ಧಿಯು ಮೆಚ್ಚಿ ತಲೆದೂಗುವಂತೆ, ಈ ಸುಖಾಸನದಲ್ಲಿ ನಮ್ಮ ಪ್ರಾಣಮನೋಬುದ್ಧಿಗಳಂತೆ ದೇಹಗಳೂ ಒಂದಾಗುವ ಅವಸರದಲ್ಲಿ, ಏಕಾಂತದಲ್ಲಿ ಕೈಗೆ ಸಿಗುವುದೇ ಅಪರೂಪವಾದ ತಾವು ನನಗೆ ಸಿಕ್ಕಿರುವಾಗ, ಇನ್ನೂ ಅಷ್ಟು ಹೊತ್ತು ತಮ್ಮ ಮಧುರಾಲಾಪವನ್ನು ಬಯಸಿ ಈ ಕಿವಿಗಳು ಒಂದಕ್ಕೆರಡಾಗಿರುವುವು. ಆದ್ದರಿಂದ, ತಾವು ಏನಾದರೂ ಹೇಳುತ್ತಿರಿ, ನಾನೂ ಯಥಾಶಕ್ತಿಯಾಗಿ ಪ್ರಣಯೋಪಚಾರವನ್ನು ಒಪ್ಪಿಸುತ್ತ ಸಂತೋಷವಾಗಿ ಕೇಳುವೆನು.
“ಭಲೇ, ದೇವಿ, ಕಿವಿಗಳು ಒಂದಕ್ಕೆರಡಾಗಿವೆಯೆಂದು ಸಂತೋಷದಿಂದ