ಪುಟ:Mahakhshatriya.pdf/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೊದಲು ಧರ್ಮಲೋಪವಾಗುವಂತೆ ಮಾಡುವೆವು. ಉಚ್ಛ್ರಯವೂ ಧರ್ಮವೂ ಜೊತೆ ಜೊತೆಯಲ್ಲಿರುವವು. ಅದರಿಂದ, ನೀನು ಹೇಳಿದಂತೆ, ಈ ನಮ್ಮ ಪ್ರಭಾವಲೋಪವು ಧರ್ಮಲೋಪದಿಂದ ಆಗಿರಬೇಕು. ಆಗಲಿ ಆದಷ್ಟು ಬೇಗ ಪ್ರಜಾಪತಿಯ ಬಳಿಗೆ ಹೋಗಿ ಈ ಲೋಪವನ್ನು ಸರಿಪಡಿಸಿಕೊಂಡು ಬರುವೆನು.”

ಶಚಿಯು ಕೇಳಿದಳು - “ದೇವತೆಗಳಾದ ನಿಮಗೆ ಆಗಾಗ ಪ್ರಭಾವ ಲೋಪವಾಗುವುದಲ್ಲಾ ಏಕೆ ?” ಇಂದ್ರನು ಹೇಳಿದನು : “ದೇವಿ ಲೋಕದಲ್ಲಿ ಎಲ್ಲವೂ ನಮ್ಮ ನಮ್ಮ ಪೌರುಷದಿಂದಲೇ ನಡೆಯುವುದು ಎಂದು ಎಲ್ಲರ ನಂಬಿಕೆ. ಆದರೆ ನಿಜವಾಗಿ ಹೇಳುವೆನು. ಮತರ್ಯ್‌ಪಾತಾಳಗಳು ದೇವತೆಗಳ ಕೈಯಲ್ಲಿರುವುವು ; ದೇವಲೋಕವು ಕಾಲನ ಕೈಯಲ್ಲಿರುವುದು. ದೇವತೆಗಳಾದ ನಾವು ಕಾಲದ ಸ್ವರೂಪವನ್ನು ಇತರರಿಗಿಂತ ಕೊಂಚ ಹೆಚ್ಚಾಗಿ ಬಲ್ಲೆವು. ಆದರೆ ಕಾಲಸ್ವರೂಪವನ್ನು ಕಂಡವರಿಲ್ಲ. ಆ ಕಾಲದ ಪ್ರಭಾವವೆಂದರೆ ಮೊದಲು ಕೊನೆಯಾಗುವುದು. ಕೊನೆಯು ಮೊದಲಾಗುವುದು. ಅದನ್ನು ಕಾಲಸ್ವರೂಪನಾದ ಮಹಾವಿಷ್ಣುವೊಬ್ಬನು, ಆ ಕಾಲವನ್ನು ಗೆದ್ದಿರುವ ಮಹಾದೇವನು ಇಬ್ಬರಲ್ಲದೆ ಇನ್ನೂ ಯಾರೂ ಕಾಣರು. ಇವರಿಬ್ಬರ ಅನುಗ್ರಹದಿಂದ ಚತುರ್ಮುಖನು ಬಲ್ಲನು. ಅದರಿಂದ ನಾವು ಎಚ್ಚರವಾಗಿದ್ದೂ ತಪ್ಪÅವುದು ಕಾಲದ ಮಹಿಮೆ.

ಶಚಿಯು ಇನ್ನೂ ಏನೋ ಕೇಳಬೇಕು ಎಂದಿದ್ದಳು. ಅಷ್ಟರೊಳಗೆ ಮತ್ತೆ ಗೂಢಚಾರನು ಬಂದು ಅರಿಕೆಮಾಡಿದನು : “ಮಹೇಂದ್ರನಿಗೆ ವಿಜಯವಾಗಲಿ. ಪಾತಾಳಲೋಕದಿಂದ ದಾನವಸೇನೆಯು ಹೊರಟಿರುವುದು. ಯಮಧರ್ಮರಾಜನ ಸಂಯವಿನೀಪುರದತ್ತ ಹೋಗಬಹುದು.”

ಇಂದ್ರನು, “ಇನ್ನು ತಡೆಯಕೂಡದು. ಯಮಧರ್ಮರಾಜನ ಸಹಾಯಾರ್ಥವಾಗಿ ಒಂದು ಕೋಟಿ ದೇವಸೇನೆಯು ಹೋಗಬೇಕು ಎಂದು ಈ ಕೂಡಲೆ ಚಿತ್ರರಥನಿಗೆ ಅಪ್ಪಣೆಯನ್ನು ಕಳುಹಿಸು, ಉಚ್ಛ್ರೆಶ್ರವವು ಸಿದ್ಧವಾಗಲಿ, ನಾನು ಚತುರ್ಮುಖನನ್ನು ಕಂಡುಬರುವೆನು.” ಇಂದ್ರನು ಅವಸರವಾಗಿ ಹೊರಟನು. ಉಚ್ಛೈಶ್ರವವು ಅರಮನೆಯೊಳಕ್ಕೆ ಬಂದಿತು. ಇನ್ನೊಂದು ಗಳಿಗೆಯೊಳಗಾಗಿ ಇಂದ್ರನು ಬ್ರಹ್ಮಲೋಕದ ಹಾದಿಯಲ್ಲಿ ಇದ್ದನು.

ಚತುರ್ಮುಖನು ಶ್ವಾಸವನ್ನು ಅನುಸಂಧಾನ ಮಾಡಿ ನೋಡಿದನು. ಶ್ವಾಸವು “ಅಸುರರು ಗೆದ್ದರೂ ಗೆಲ್ಲಬಹುದು. ಆದರೆ ದೇವರಾಜನು ಬರುತ್ತಿದ್ದಾನೆ. ಆತನ ಪ್ರಯತ್ನದಿಂದ ಅಸುರರಿಗೆ ಪರಾಜಯವಾದರೂ ಆಗಬಹುದು” ಎಂದು ಹೇಳಿತು. ಚತುರ್ಮುಖನು ಎಲ್ಲ ಕೆಲಸವನ್ನೂ ಬಿಟ್ಟು ಕಾಲವನ್ನು ಕುರಿತು