ವಿಷಯಕ್ಕೆ ಹೋಗು

ಪುಟ:Mahakhshatriya.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇಂದ್ರನಾದನು

ನಹುಷ ಚಕ್ರವರ್ತಿಯು ಸತೀದ್ವಿತೀಯನಾಗಿ ಹಂಸತೂಲಿಕಾತಲ್ಪದಲ್ಲಿ ಮಲಗಿದ್ದಾನೆ. ಶಯ್ಯಾಮಂದಿರದ ನಾಲ್ಕು ಮೂಲೆಗಳಲ್ಲಿ ರತ್ನಖಚಿತವಾಗಿ ಸುವರ್ಣಮಯವಾದ ದೀಪದ ಮಲ್ಲಿಗಳು ಸುವಾಸಿತಘೃತತೈಲಗಳ ದೀಪಗಳನ್ನು ಹೊತ್ತು ನಿಂತಿವೆ. ಗೋಡೆಗಳಲ್ಲಿರುವ ಜೀವರತ್ನಗಳು ಆ ದೀಪಗಳ ಕಾಂತಿಯ ಕಿರಣಗಳನ್ನು ಪ್ರತಿಫಲಿಸಿ ಮಂದಿರವೆಲ್ಲವೂ ಮಂದಪ್ರಭಾಸುಂದರವಾಗುವಂತೆ ಮಾಡಿವೆ. ಆ ಗೋಡೆಗಳ ಮೇಲೆ ಇರುವ ತೈಲಚಿತ್ರಗಳ ಮುಂದೆ ಮಂದಾಸನಗಳಲ್ಲಿ ಇಟ್ಟಿರುವ ಪುಷ್ಟಕರಂಡಗಳು ಹರಡಿರುವ ತೈಲಘೃತಗಳ ಸುವಾಸನೆಗೆ ತಮ್ಮ ಸುವಾಸನೆಯನ್ನೂ ಕೊಟ್ಟು ಇಲ್ಲಿ ಪುಷ್ಟೋದ್ಯಾನದ ಭ್ರಾಂತಿಯನ್ನು ತರುವಂತಿವೆ. ತಲ್ಪದ ಮೇಲಿರುವ ಛತ್ತಿನಲ್ಲಿ ಕೆತ್ತಿರುವ ವಜ್ರಾದಿಗಳು ತಮ್ಮ ಹೊಳಪಿನಿಂದ ನೀಲಾಕಾಶವನ್ನು ನೆನಪಿಗೆ ತಂದರೇ ಆ ಮಂದಿರದ ಮೇಲ್ಛಾವಣಿಯ ಗೋಡೆಗಳು ತಮ್ಮ ನಕ್ಷತ್ರ ಚಿತ್ರಗಳಿಂದ ಈ ಭಾವನೆಯನ್ನು ಸ್ಥಿರಗೊಳಿಸುತ್ತಿವೆ. ಮಂದಿರದಲ್ಲಿ ಹಾಸಿರುವ ರತ್ನಗಂಬಳಿಯು ಮೃದುವಾಗಿ, ಪ್ರಿಯವಾಗಿ, ತನ್ನ ಕೆಳಗೆ ನೆಲವೇ ಇಲ್ಲವೇನೋ, ಇದು ಯಾವುದೋ ಪುಷ್ಟಮೇಘಗಳ ಲೋಕದ ನೆಲವೇನೋ ಎಂಬಂತೆ ಇದೆ.

ಬೆಳಗಿನ ಝಾವ, ಮೂರನೆಯ ಪ್ರಹರವು ಮುಗಿದು ನಾಲ್ಕನೆಯ ಪ್ರಹರವು ಆರಂಭವಾಗುವ ಕಾಲ. ಅರಸನನ್ನು ಎಚ್ಚರಿಸಲು ಎದುರಿನ ಮಹಡಿಯ ಮೇಲೆ ವಾದ್ಯಗಳೆಲ್ಲವೂ ಮೃದುವಾಗಿ ನುಡಿಯುವುದಕ್ಕೆ ಸಿದ್ಧವಾಗಿವೆ. ವಾದ್ಯಗಾರರು ಬಂದು ಕುಳಿತುಕೊಂಡು ವಾದ್ಯಗೋಷ್ಠಿಗೆ ಅಣಿಮಾಡಿಕೊಳ್ಳುತ್ತಿದ್ದಾರೆ.ಆ ಸಮಯದಲ್ಲಿ ಅರಸನಿಗೆ ಒಂದು ಕನಸಾಯಿತು.

ಅರಸನು ಉದ್ಯಾನದಲ್ಲಿ ವಿರಜಾದೇವಿಯೊಡನೆ ಕಮಲಪುಷ್ಟದ ಕೊಳದಲ್ಲಿ ಆಟವಾಡಬೇಕೆಂದು ಇಳಿಯುತ್ತಿದ್ದಾನೆ. ಮಗ್ಗುಲಲ್ಲಿದ್ದ ಮೃಗಾಲಯದಿಂದ ಸಿಂಹವೊಂದು ತಪ್ಪಿಸಿಕೊಂಡು ಅರಸನ ಹತ್ತಿರಕ್ಕೆ ಓಡೋಡಿ ಬರುತ್ತದೆ. ವಿರಜಾದೇವಿಯು ಭಯದಿಂದ ಅದನ್ನು ತೋರಿಸುತ್ತಾಳೆ. ಅರಸನು ವಿಶ್ವಾಸದಿಂದ ಅದನ್ನು ಹಿಡಿದು ಅದರ ಮೇಲೆ ಕುಳಿತುಕೊಳ್ಳುತ್ತಾನೆ. ಅದು ಆಕಾಶಕ್ಕೆ ಹಾರುತ್ತದೆ.