ಪುಟ:Mahakhshatriya.pdf/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಲ್ಲಿ ಸುಧಾಕಲಶದಂತಿರುವ ಚಂದ್ರನ ಬಳಿಗೆ ಹೋಗುತ್ತದೆ. ಚಂದ್ರನು ಸಶರೀರವಾಗಿ ಘನವಾಗಿ ನೀರ್ಗಲ್ಲಿನಂತೆ ಮೆರೆಯುತ್ತಾ “ನಾನೇ ಬರಬೇಕೆಂದಿದ್ದೆ. ನೀನೇ ಬಂದೆ. ಒಳ್ಳೆಯದಾಯಿತು” ಎನ್ನುತ್ತಾ “ಒಂದು ರಹಸ್ಯವನ್ನು ಕೇಳು. ಇಂದು ದೇವಋಷಿಪಿತೃಗಣಗಳು ಬಂದು ನಿನಗೆ ಇಂದ್ರಪಟ್ಟವನ್ನು ಒಪ್ಪಿಸುವರು. ಅದರಲ್ಲಿ ಮೋಸಹೋಗದಂತೆ ನೋಡಿಕೊ” ಎನ್ನುವನು. ಅಷ್ಟರಲ್ಲಿ ವಾದ್ಯಗಳ ಮೊಳಗುವಿಕೆಯಿಂದ ಎಚ್ಚರವಾಯಿತು.

ಅರಸನು ವಿರಜಾದೇವಿಯನ್ನು ಆಲಂಗಿಸಿಕೊಂಡು ಇನ್ನೂ ಒಂದುಗಳಿಗೆ ಇದ್ದನು. ಆಕೆಯು ಎಚ್ಚೆತ್ತಿರುವುದನ್ನು ಅರಿತು ಆಕೆಗೆ ಆ ಶುಭಸ್ವಪ್ನವೃತ್ತಾಂತವನ್ನು ಹೇಳಿ, ಆಕೆಯು “ಕನಸು ನಿಜವಾಗಲಿ. ನನ್ನೊಡೆಯನನ್ನು ಇಂದ್ರನನ್ನಾಗಿ ಪಡೆಯುವ ಭಾಗ್ಯವು ಮೂರು ಲೋಕಗಳಿಗೂ ಬರಲಿ !” ಎಂದು ಹಾರೈಸಿ ಕೈಮುಗಿಯುತ್ತಿರಲು ಎದ್ದನು.

ಅಂದು ಆತನು ದೇವಗೃಹದಲ್ಲಿ ಆರಾಧನೆಯನ್ನು ಮುಗಿಸಿಕೊಂಡು ಅಗ್ನಿಗೇಹಕ್ಕೆ ಬಂದು ಅಗ್ನಿಪೂಜೆಯನ್ನು ನೆರೆವೇರಿಸುತ್ತಿರುವಾಗ, ಯಜ್ಞೇಶ್ವರನು ದರ್ಶನಕೊಟ್ಟನು. ಮೇಷರೂಢನಾಗಿ ಜಟಾಬದ್ಧನಾಗಿರುವ ಆ ಮೂರ್ತಿಯನ್ನು ಕಂಡು ನಹುಷದಂಪತಿಗಳು ವಿಶೇಷ ಪೂಜೆಯನ್ನೊಪ್ಪಿಸಿದರು. ಯಜ್ಞೇಶ್ವರನು “ಅರಸಾ, ದೇವಋಷಿಪಿತೃಗಳ ಪ್ರತಿನಿಧಿಗಳು ನಿನ್ನನ್ನು ಕಾಣಲು ಬರುವರು. ಧರ್ಮಾಂಗಣದಲ್ಲಿ ಪ್ರತೀಕ್ಷಿಸುತ್ತಿರು” ಎಂದು ಹೇಳಿ ಮರೆಯಾದನು.

ಅರಸನು ಪತ್ನಿಸಮೇತನಾಗಿ ಧರ್ಮಾಂಗಣಕ್ಕೆ ಬಂದನು. ಅರಸನಪ್ಪಣೆಯಿಂದ ಪುರೋಹಿತನು ಮಧುಪರ್ಕ ಪೂಜಾಸಾಮಗ್ರಿಗಳೊಡನೆ ಬಂದು ಕಾದಿದ್ದನು. ಆಸನಗಳು ಸಿದ್ಧವಾಗಿದ್ದವು.

ಗಾಳಿಯು ಒಂದು ಸಲ ಮೃದುವಾಗಿ ಬೀಸಿತು. ಆ ಮಂದಿರವೆಲ್ಲವೂ ದಿವ್ಯ ಪರಿಮಳದಿಂದ ತುಂಬಿತು. ಮತ್ತೊಂದು ಗಳಿಗೆಯೊಳಗಾಗಿ ಪ್ರಭಾಮಂಡಲವಂತರಾದ ದಿವ್ಯಮೂರ್ತಿಗಳು ಗೋಚರವಾದವು. ರಾಜದಂಪತಿಗಳು ಸಪರಿವಾರರಾಗಿ ನಮಸ್ಕಾರಮಾಡಿ ಅವರನ್ನೆಲ್ಲಾ ಆಸನಗಳಲ್ಲಿ ಕುಳ್ಳಿರಿಸಿ, ಅವರಿಗೆ ಸಮರ್ಚನವನ್ನು ಒಪ್ಪಿಸಿದರು. ಅರಸನೇ ಮೊದಲು ಮಾತನಾಡಿದನು : “ತಮ್ಮ ದರ್ಶನಕ್ಕಾಗಿ ಮಾನವರು ಹಗಲಿರುಳು ಶ್ರಮಪಡುವರು. ನಮ್ಮ ಪೂರ್ವಜರ ಪುಣ್ಯ. ನಮ್ಮ ಪೂರ್ವಾರ್ಜಿತ ಪುಣ್ಯ. ತಾವೇ ನಮಗೆ ದರ್ಶನ ಕೊಟ್ಟಿರಿ.”

ಜೊತೆಯಲ್ಲಿದ್ದವರೆಲ್ಲರ ಅಪ್ಪಣೆಯನ್ನು ಪಡೆದು ಸುರಾಚಾರ್ಯನು