ಪುಟ:Mahakhshatriya.pdf/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮಾತನಾಡಿದನು : “ಚಕ್ರವರ್ತಿ, ನೀನು ಚಂದ್ರವಂಶದ ರಾಜೇಂದ್ರನು. ಚಂದ್ರನಿಂದ ಐದನೆಯವನು. ನಿನ್ನ ಪುಣ್ಯಬಲದಿಂದ ಮೂರು ಲೋಕಗಳಿಗೂ ಅರಸನಾಗಲು ಅರ್ಹನಾದವನು. ಅದರಿಂದಲೇ ನಾವು ನಿನ್ನ ದರ್ಶನಕ್ಕೆ ಬಂದಿರುವೆವು. ಬಂದ ಕೆಲಸವಿರಲಿ. ನಿನ್ನ ರಾಜ್ಯವು ಚೆನ್ನಾಗಿದೆಯೆ? ನಿನ್ನ ಪ್ರಜೆಗಳೆಲ್ಲರೂ ಸೌಖ್ಯದಿಂದಿರುವರೋ? ನಿನ್ನ ಧರ್ಮವು ಅಧ್ಯಯನ, ಆಚರಣೆಗಳಿಂದ ಪರಿವರ್ಧಿತವಾಗುತ್ತಿದೆಯೋ? ನಿನ್ನ ಅರಮನೆಯವರೆಲ್ಲರೂ ಕುಶಲಿಗಳಷ್ಟೇ?”

ನಹುಷನು ಸಂತೋಷದಿಂದ ಬಿನ್ನವಿಸಿದನು : “ದೇವ, ನೀವು, ದೇವತೆಗಳು, ಸೂತ್ರಧಾರರು. ನೀವು ಸೂತ್ರವನ್ನೆಳೆದತ್ತ ಕುಣಿಯುವ ಬೊಂಬೆಗಳು ನಾವಾದರೂ, ಆಹಂಕಾರದಿಂದ ನಾವು ನಾವು ಎಂದು ಎದೆ ತಟ್ಟಿಕೊಳ್ಳುವೆವು. ತಮ್ಮ ಕೃಪೆಯಿಂದ ಧರ್ಮಾರಾಧನವು ಕ್ರಮವಾಗಿದೆ. ರಾಜ್ಯಸೂತ್ರಗಳು ಭದ್ರವಾಗಿವೆ. ಪ್ರಜೆಗಳೆಲ್ಲರೂ ಸುಖಿಗಳಾಗಿ ವರ್ಧಿಷ್ಣುಗಳಾಗಿದ್ದಾರೆ. ನಾನೂ ಸಕುಟುಂಬವಾಗಿ ಸಪರಿವಾರನಾಗಿ ಕ್ಷೇಮವಾಗಿದ್ದೇನೆ.”

ದೇವಗುರುವು ಒಂದು ಗಳಿಗೆ ತಡೆದು, “ನೀನು ಹೇಳುವುದಕ್ಕೆ ತಮ್ಮೆಲ್ಲರ ಸಮ್ಮತಿಯುಂಟಷ್ಟೇ’ ಎಂದು ಕೇಳುವವನಂತೆ ತನ್ನ ಜೊತೆಯಲ್ಲಿದ್ದವರ ಮುಖವನ್ನು ನೋಡಿ ಹೇಳಿದನು ; “ಅರಸಾ, ನಾವು ನಿನ್ನ ಬಳಿಗೆ ವಿಚಿತ್ರವಾದ ಪ್ರಾರ್ಥನೆಯೊಂದನ್ನು ಮಾಡಿಕೊಳ್ಳಲು ಬಂದಿದ್ದೇವೆ. ನೀನು ಅನುಕೂಲನಾಗಿ ಅದನ್ನು ಒಪ್ಪಿಕೊಳ್ಳಬೇಕು.”

ನಹುಷನು ಸಣ್ಣಗೆ ನಕ್ಕು ಹೇಳಿದನು ; “ದೇವ, ಆ ಪ್ರಾರ್ಥನೆಯಾದರೂ ಎಂಥದು ? ಸಾಮಾನ್ಯವಾಗಿ ತಾವು ಹೇಳುವುದು ನಾವು ಕೇಳುವುದು ಆಗಿರಲು, ನಮ್ಮನ್ನು ಕೇಳಿ ನಾವು ಅನುಕೂಲರಾಗಿ ನಡೆಸಿಕೊಡಬೇಕಾದ ಆ ಮಹತ್ಕಾರ್ಯವಾದರೂ ಏನು ?”

“ಮಧ್ಯಮಲೋಕಚಕ್ರವರ್ತಿ, ಈಗ ಕಾರಣಾಂತರಗಳಿಂದ ಇಂದ್ರಪದವಿಯು ಶೂನ್ಯವಾಗಿರುವುದು. ಅದನ್ನು ನೀನು ಅಲಂಕರಿಸಬೇಕೆಂದು ಕೇಳಲು ನಾವು ಬಂದಿರುವೆವು. ಇವರು ಋಷಿಗಣದ ಪ್ರತಿನಿಧಿಗಳು. ಇವರು ಪಿತೃಗಣದ ಪ್ರತಿನಿಧಿಗಳು. ಈತನು ದೇವಾಗ್ರಗಣ್ಯರಲ್ಲಿ ಒಬ್ಬನಾದ ಜಾತವೇದನು. ನನ್ನನ್ನಂತೂ ಬಲ್ಲೆ.”

ನಹುಷನು ಪತ್ನಿಯ ಮುಖವನ್ನು ನೋಡಿದನು. ಆ ನೋಟದಲ್ಲಿ ಬೆಳಗಿನ ಕನಸು ನಿಜವಾಯಿತಲ್ಲಾ ಎಂಬರ್ಥವಿತ್ತು. ಗಂಭೀರವಾಗಿ ಕೇಳಿದನು : “ಈ ಅರ್ಥದಲ್ಲಿ ನಾವು ಸ್ವತಂತ್ರರೋ ? ಅಥವಾ ತಾವು ಹೇಳಿದಂತೆ ಕೇಳಲೇಬೇಕೋ?”