ಪುಟ:Mahakhshatriya.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ನಿನ್ನ ಅಧಿಕಾರದಿಂದ ಮತ್ತು ಆನಂದಭೋಗದಿಂದ. ಎಂದರೆ, ನಿನ್ನ ಕಣ್ಣಿಗೆ ಬಿದ್ದವರು ತಾವಾಗಿ ನಿನಗೆ ಹೆದರುವರು. ಅದು ಅಧಿಕಾರ ಲಕ್ಷಣ. ಎರಡನೆಯದು ನಿನ್ನ ಆನಂದಾನುಭವಶಕ್ತಿಯು ಬದಲಾಗುವುದು. ಅದೇ ಜಂತುವನ್ನು ಅಳೆಯುವ ಶಕ್ತಿಯು. ಮನುಷ್ಯನಾಗಿ, ಸಾಮ್ರಾಟನಾಗಿ, ಬಲಿಷ್ಠನಾಗಿ, ಯವಿಷ್ಟನಾಗಿ, ಸರ್ವವಸ್ತು ಸಂಪನ್ನನಾಗಿರುವವನು ಅನುಭವಿಸುವ ಆನಂದವು ಮಾನದಂಡವು. ಈ ಆನಂದವು ಅಂತಃಕರಣದಲ್ಲಿ ತೋರುವ ವಿಶೇಷವೃತ್ತಿಯು. ನಾವು ಆನಂದಾನುಭವ ಶಕ್ತಿಯನ್ನು ಬೆಳೆಸುವೆವು, ಎಂದರೆ ಆ ಅಂತಃಕರಣವು ಆನಂದವನ್ನು ಅಷ್ಟರವರೆಗೆ ಪ್ರಕಟಿಸಬಲ್ಲದು ಎಂದು. ಅದರಿಂದ, ಮಾನವೇಂದ್ರ, ನಿನ್ನ ಕರ್ಮ ಕಲಾಪಗಳಿಂದ, ಯಜ್ಞಯಾಜನಾದಿಗಳಿಂದ, ಇಷ್ಟಾಪೂರ್ತ ಕರ್ಮಗಳಿಂದ ನೀನು ಹೊಂದುವ ಪರಮವಾದ ಆನಂದವೆಷ್ಟು ಬಲ್ಲೆಯಾ ? ನೀನು ಯಾವುದೋ ಒಂದು ದೇವತೆಯಲ್ಲಿ ನಿನ್ನ ಕರ್ಮಾನುಷ್ಠಾನಬಲದಿಂದ, ನಿನ್ನ ವಿದ್ಯಾಪ್ರಭಾವದಿಂದ ಅಪ್ಯಾಯನಾಗುವೆ. ಆಗ ಆ ದೇವತೆಯ ಆನಂದವನ್ನು ಪಡೆಯುವೆ. ಅದು ದೇವಾನಂದವು. ನೀನು ನಾವು ಹೇಳುವಂತೆ ಇಂದ್ರನಾಗುವುದಾದರೆ, ಆ ದೇವಾನಂದದ ನೂರರಷ್ಟು ಆನಂದವನ್ನು ಪಡೆಯುವೆ. ಈಗ ಇಲ್ಲಿರುವ ನಮ್ಮಲ್ಲಿ ಪಿತೃಗಳೂ ನಿನ್ನ ಆನಂದಾನುಭವಶಕ್ತಿಯನ್ನು ಕೊಡುವರು. ಎಂದರೆ ನಿನ್ನ ಯೋನಿಯನ್ನು ಬದಲಾಯಿಸುವರು. ಯೋನಿ ಎನ್ನುವುದು ಒಂದು ಅಚ್ಟು. ಅಚ್ಚಿಗೆ ಆಳ ಉದ್ದ ಅಗಲಗಳ ಮೇಲಲ್ಲವೆ ಅದರ ಪ್ರಮಾಣವು? ಹಾಗೆ ಮನುಷ್ಯ ಯೋನಿಯಾದ ನಿನ್ನನ್ನು ದೇವಯೋನಿಯನ್ನಾಗಿ ಮಾಡುವರು. ಆ ಪ್ರಮಾಣದ ಆನಂದವನ್ನು ಪಡೆಯುವುದಕ್ಕೆ ಬೇಕಾದ ಜ್ಞಾನವನ್ನು ಋಷಿಗಳು ಕೊಡುವರು. ಅಂದರೆ, ಈಗ ಪ್ರತಿಯೊಂದು ಪ್ರಾಣಿಯೂ ನಿದ್ದೆಯಲ್ಲಿ ಆನಂದದ ಪರಾಕಾಷ್ಠತೆಯನ್ನು ಪಡೆಯುವುದು ಆದರೆ, ಆಗ ಅದು ಆನಂದ ಎಂದು ತಿಳಿಯುವ ಜ್ಞಾನವಿರುವುದಿಲ್ಲ. ಅಲ್ಲಿ ಪಡೆಯುವ ಆನಂದವು ಆನಂದವೇ ಎಂದು ತಿಳಿಯುವುದೇ ಆ ಜ್ಞಾನವು. ನಾವು ದೇವತೆಗಳು ಆ ಆನಂದವನ್ನು ಕೊಡುವೆವು. ಹೀಗೆ, ಅಧಿಕಾರ, ಆನಂದ ಎರಡನ್ನೂ ನಾವು ಕೊಟ್ಟು ನಿನ್ನನ್ನು ಇಂದ್ರನನ್ನು ಮಾಡುವೆವು.”

ನಹುಷನು ಎಲ್ಲವನ್ನೂ ಸಾವಧಾನವಾಗಿ ಕೇಳಿ ವಿನಯದಿಂದ ಕೈ ಮುಗಿದು ಹೇಳಿದನು : “ದೇವ, ತಾವು ಹೇಳುತ್ತಿರುವಾಗ ಬೇಡವೆನ್ನಲು ಸಾಧ್ಯವಿಲ್ಲ. ಅಲ್ಲದೆ, ಮನುಷ್ಯಲೋಕದಲ್ಲಿ ನ್ಯಾಯವಾಗಿ ರಾಜ್ಯಭಾರ ಮಾಡಿದವರಿಗೆ ಇಂದ್ರಸಿಂಹಾಸನದಲ್ಲಿ ಅರ್ಧಸಿಕ್ಕುವುದು ಎಂದು ಬಲ್ಲವರು ಹೇಳುವರು. ತಾವು