ಪುಟ:Mahakhshatriya.pdf/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಚಿಂತಿಸಿದನು. “ದೇವತೆಗಳಿಗೆ ಪ್ರಭಾವಲೋಪವಾಗಿದೆಯಾದರೂ ಅಸುರರು ಲೋಕತ್ರಯಾಧಿಪತ್ಯವನ್ನು ವಹಿಸುವ ಕಾಲವು ಇನ್ನೂ ಬಂದಿಲ್ಲ” ಎಂದು ತಿಳಿಯಿತು. ಪ್ರಭಾವಲೋಪವಾಗಿರುವುದು ಏಕೆ ಎಂಬುದನ್ನೂ ವಿಚಾರಮಾಡಿ ನೋಡಿದನು. ‘ಧರ್ಮಾಚಾರ್ಯನಾದ ಬೃಹಸ್ಪತಿಯು ಮರೆಯಾಗಿದ್ದಾನೆ’ ಎಂದು ತಿಳಿಯಿತು. ಬ್ರಹ್ಮನು ತನ್ನ ಪ್ರಭಾವದಿಂದ ಬೃಹಸ್ಪತಿಯನ್ನು ಕರೆದನು. ಬೃಹಸ್ಪತಿಯು ಬಂದು ವಿನಯದಿಂದ “ನನಗೆ ಇನ್ನು ಒಂದು ವರುಷ ಅವಕಾಶ ಕೊಡಬೇಕು, ಅದುವರೆಗೆ ಒಂದು ತಪಸ್ಸು ಮಾಡಬೇಕಾಗಿದೆ” ಎಂದನು. ಬ್ರಹ್ಮನು ನಕ್ಕು ‘ತಪ್ಪಿಸಿಕೊಳ್ಳುವುದಕ್ಕೆ ಕಾರಣವು ಚೆನ್ನಾಗಿದೆ” ಎಂದು ಆತನನ್ನು ಬೀಳ್ಕೊಟ್ಟು ಮುಂದೇನು ಮಾಡಬೇಕು ಎಂದು ಆಲೋಚಿಸಿದನು. ಆತನಿಗೆ ಇಂದ್ರನು ತನಗೊಬ್ಬ ಧರ್ಮಾಚಾರ್ಯನನ್ನು ಹುಡುಕಿಕೊಡು ಎಂದು ಕೇಳಲು ಬರುವನೆಂದು ಗೊತ್ತು.

ಆತನ ಮನಸ್ಸು ಹುಡುಕಿತು : “ಧರ್ಮಾಚಾರ್ಯನಿಗೆ ಇರಬೇಕಾದ ಗುಣಗಳೆಲ್ಲವೂ ಯಾರಲ್ಲಿ ಉಂಟು ? ನವಬ್ರಹ್ಮರು ಸಂತಾನಾರ್ಥವಾಗಿ ತಪಸ್ಸು ಮಾಡುತ್ತಿರುವರು. ಕಶ್ಯಪನ ಮಕ್ಕಳು ಬೇರೆ ಬೇರೆ ಕಾರ್ಯದಲ್ಲಿ ನಿಯೋಜಿತರಾಗಿರುವರು. ದಕ್ಷನ ಮಕ್ಕಳು ಆಗುವುದಿಲ್ಲ ಹೀಗೆ ಚಿಂತಿಸುತ್ತಾ ತ್ವಷ್ಟುೃಬ್ರಹ್ಮನ ಮಗನಾದರೆ ಆಗಬಹುದು” ಎಂದುಕೊಂಡನು. ಆ ವೇಳೆಗೆ ‘ಇಂದ್ರನು ದರ್ಶನಾರ್ಥವಾಗಿ ಬಂದಿರುವನು’ ಎಂದು ಪ್ರಹರಿಯು ಬಂದು ಸೂಚಿಸಿದನು.

ಬ್ರಹ್ಮನು ಇಂದ್ರನನ್ನು ಬರಮಾಡಿಕೊಂಡನು. ಆತನ ಮುಖವನ್ನು ನೋಡುತ್ತಿದ್ದ ಹಾಗೆಯೇ ಆತನಿಗೆ ಆಗಿರುವ ತೇಜೋಹಾನಿಯನ್ನು ಕಂಡುಕೊಂಡು “ಏನು ಸಮಾಚಾರ? ಎಲ್ಲೂ ಇಲ್ಲದ ಅವಸರದಲ್ಲಿ ಬಂದಂತಿದೆ ?” ಎಂದು ಆದರದಿಂದ ವಿಚಾರಿಸಿದನು. ಇಂದ್ರನು ಒಂದು ಗಳಿಗೆ ತಲೆಯನ್ನು ಬಗ್ಗಿಸಿಕೊಂಡಿದ್ದು, “ದೇವಾ, ಎಲ್ಲವನ್ನೂ ಬಲ್ಲೆಯಾದರೂ ಏನೂ ತಿಳಿಯದವನಂತೆ ವಿಚಾರಿಸುತ್ತಿರುವೆ. ಆಗಲಿ, ಅರಿಕೆಮಾಡುವೆನು. ನಮ್ಮ ಧರ್ಮಾಚಾರ್ಯನಾದ ಬೃಹಸ್ಪತಿಯು ಎಲ್ಲಿಯೋ ಅಡಗಿಕೊಂಡಿರುವನು. ನಾವು ಮಾಡಬೇಕಾದ ಕರ್ಮವು ಲೋಪವಾಗಿ ನಮಗೆ ತೇಜೋಹಾನಿಯಗಿರುವುದು. ನಮ್ಮ ತೇಜೋಹಾನಿಯಿಂದ ದೈತ್ಯದಾನವರು ಪ್ರಬಲವಾಗಿ ನಮ್ಮ ಮೇಲೆ ದಾಳಿಯಿಡಬೇಕು ಎಂದಿರುವರು. ಅದರಿಂದ ಅನರ್ಥವಾಗುವ ಮೊದಲೇ ನಮಗೊಬ್ಬ ಧರ್ಮಾಚಾರ್ಯನನ್ನು ಕರುಣಿಸಬೇಕು” ಎಂದು ಬಿನ್ನವಿಸಿಕೊಂಡನು.

ಬ್ರಹ್ಮನು ನಿಟ್ಟುಸಿರು ಬಿಟ್ಟು ಹೇಳಿದನು. “ಇಂದ್ರ, ಕಾರ್ಯವು ಮಿಂಚಿತು.