ಪುಟ:Mahakhshatriya.pdf/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಎಂದಂತಾಯಿತು. ಅದು ಪೂರ್ಣವಾಗಲು ಏನಾಗಬೇಕು ? ದಯವಿಟ್ಟು ಅಪ್ಪಣೆ ಕೊಡಿಸಬೇಕು.”

ಬೃಹಸ್ಪತಿಯು ಯೋಚನಾಪರನಾದನು. “ಈತನೇಕೆ ಈ ರಹಸ್ಯವನ್ನು ಭೇದಿಸಬೇಕು ಎಂದಿರುವನು ? ಇಲ್ಲಿಯೇ ಈತನ ಪತನಬೀಜವಿದೆಯೋ? ಎನ್ನಿಸಿತು. ಆದರೆ ‘ಹೇಳದಿರುವುದು ಹೇಗೆ ? ವರವನ್ನು ಕೊಟ್ಟಾಗಿದೆ. ಹುಂ ! ಬೇಕಾದುದಾಗಲಿ, ಭವಿತವ್ಯಕ್ಕೆ ನಾನೇನು ಹೊಣೆಯೆ ?’ ಎಂದುಕೊಂಡು ಹೇಳಿದನು “ಇಂದ್ರತ್ವವು ಶಚೀಪತಿಯಾಗುವವರೆಗೂ ಪೂರ್ಣವಾಗುವುದಿಲ್ಲ”

“ಹಾಗದರೆ ಶಚಿಯು ಇಂದ್ರಾಣಿಯಲ್ಲದೆ ಇಂದ್ರಪತ್ನಿಯಲ್ಲ ?”

“ಹೌದು. ಪರಿಸ್ಥಿತಿಯಿಂದ ಹಾಗೇ ಅರ್ಥವಾಗುವುದು. ಆದರೆ ಇದುವರೆಗೆ ಇಂದ್ರನು ಬೇರೆಯಾಗಿದ್ದರೂ ಶಚಿಪತಿಯು ಬೇರಾಗಿರಲಿಲ್ಲ. ಈಗ ಶಚೀಪತಿಯು ಇಂದ್ರನೋ? ಅಥವಾ ಶಚೀದೇವಿಯು ಇಂದ್ರನ ಅಧಿಕಾರದ್ಯೋತಕವಾದ ಪ್ರತೀಕವೋ? ಅಥವಾ ಇಂದ್ರನ ಪತ್ನಿಯಾಗಿ ಆತನ ವೈಯಕ್ತಿಕ ಸಂಬಂಧ ಉಳ್ಳವಳೋ ಎಂಬುದನ್ನು ಗೊತ್ತುಮಾಡಬೇಕಾಗಿದೆ.”

“ಅದನ್ನು ಗೊತ್ತುಮಾಡುವವರು ಯಾರು ?”

“ದೇವಸಭೆ.”

“ಹಾಗಾದರೆ ದೇವಸಭೆಯನ್ನು ಸೇರಿಸಿ ಈ ಅಂಶವನ್ನು ಗೊತ್ತು ಮಾಡಿಕೊಡಬೇಕು.”

style="text-indent: 1cm;">ಸುರಾಚಾರ್ಯನು ಏನೋ ಹಿಂಸೆಗೊಳಗಾದವನಂತೆ ಹೃದಯವನ್ನು ಹಿಂಡಿಕೊಳ್ಳುತ್ತಾ “ಆಗಲಿ” ಎಂದನು.

ಇಂದ್ರನು ಅದನ್ನು ಕಂಡಾದರೂ ಆ ರಹಸ್ಯವು ಹಾಗಿರಲಿ ಎನ್ನಬಹುದಾಗಿತ್ತು; ಎನ್ನಲಿಲ್ಲ. ವಿನಯವಾಗಿ, ಗಂಭೀರವಾಗಿ ಗುರುಗಳಿಗೆ ನಮಸ್ಕಾರಮಾಡಿ, ಅವರ ಅಪ್ಪಣೆ ಪಡೆದು ಹಿಂತಿರುಗಿದನು.

ಬೃಹಸ್ಪತಿಯು ಕುಳಿತಿದ್ದೆಡೆಯನ್ನು ಬಿಡದೆ, ಕುಳಿತಲ್ಲಿಯೇ ಕುಳಿತು ಯೋಚಿಸಿದನು. ‘ಈಗ ದೇವಸಭೆಯನ್ನು ಕರೆಯುವುದೇನೋ ಆಗುವುದು. ಆದರೆ ಅಲ್ಲಿ ಸಿದ್ಧಾಂತಕ್ಕೆ ಬರುವವರು ಯಾರು ? ಅವರೂ ನನ್ನನ್ನೇ ಕೇಳುವರು. ಏನು ಹೇಳಬೇಕು ?’ ಎಂದು ಬಹಳವಾಗಿ ಯೋಚಿಸಿದನು. ಕೊನೆಗೆ ಅಲ್ಲಿಂದ ಎದ್ದು ‘ನಾನೇಕೆ ವ್ಯಥಿಸಲಿ ? ಇದು ಮಹಾವಿಷ್ಣುವಿನ ಅಪ್ಪಣೆಯಂತೆ ಆಗುತ್ತಿದೆ. ಆತನು ಒಳಗೆ ಕುಳಿತು ಏನು ಹೇಳಿಸುವನೋ ಹಾಗೆಯೇ ಹೇಳುವುದು. ಫಲಾಫಲಗಳನ್ನು ಕಾದು ನೋಡುವುದು’ ಎಂದು ಅಲ್ಲಿಂದ ಹೊರಟುಹೋದನು.