ಪುಟ:Mahakhshatriya.pdf/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೋಗುವಾಗ ಆಳುಗಳನ್ನು ಕರೆದು. “ಚಿತ್ರರಥ ಗಂಧರ್ವರಾಜನನ್ನು ಬರಹೇಳು” ಎಂದು ಆಜ್ಞೆ ಮಾಡಿದನು.

ಇನ್ನೊಂದು ಗಳಿಗೆಗೆ ಚಿತ್ರರಥನು ಕಾಣಿಸಿಕೊಂಡನು. ಬೃಹಸ್ಪತಿಯು “ಗಂಧರ್ವರಾಜ ಈ ಇಂದ್ರನು ಇನ್ನೊಂದು ಗೊಂದಲವೆಬ್ಬಿಸಿದ್ದಾನೆ. ಇದೇ ಈತನ ಪತನಕ್ಕೆ ಕಾರಣವಾದೀತೋ ಏನೋ ? ಏನಾದರಾಗಲಿ, ದೇವಸಭೆಯನ್ನು ಕರೆ. ಶಚೀದೇವಿಯಿಲ್ಲದೆ ಇಂದ್ರಾಧಿಕಾರವು ಪೂರ್ಣವಾಗುವುದಿಲ್ಲ. ಅದರಿಂದ ಆಕೆಯು ಇಂದ್ರಾಣಿಯೋ ಇಂದ್ರಪತ್ನಿಯೋ ಗೊತ್ತುಮಾಡಬೇಕು” ಎಂದನು.

ಚಿತ್ರರಥನು ಏನೋ ಹೇಳುವುದಕ್ಕೆ ಹೋದನು. ದೇವಗುರುವು “ಆ ವಿಚಾರ ನಾನೂ ನೀನೂ ಚರ್ಚಿಸುವುದು ಬೇಡ. ಅದನ್ನು ದೇವಸಭೆಯೇ ವಿಚಾರಿಸಿ, ಚರ್ಚಿಸಿ ಗೊತ್ತು ಮಾಡಲಿ. ನಾವಿಬ್ಬರೂ ತಲೆಮರೆಸಿಕೊಂಡಿರುವ ಇಂದ್ರನ ಕಡೆಯವರು” ಎಂದು ಏನೋ ಬೇಸರದಿಂದ ಎಲ್ಲವನ್ನೂ ಮುಕ್ತಾಯ ಮಾಡಿದನು.

ಚಿತ್ರರಥನೂ ಏನೋ ಅಸಂತೋಷದಿಂದ “ಸರಿ” ಎಂದು ಕೈಮುಗಿದು ಆಜ್ಞವಾಹಕನಾಗಿ ಹೊರಟುಹೋದನು.

* * * *