ಪುಟ:Mahakhshatriya.pdf/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಶ್ನೆ. ಅದಕ್ಕೆ ನಮ್ಮ ಮಿತ್ರರು ಉತ್ತರ ಕೊಟ್ಟಿದ್ದಾರೆ. ಮಾನವರು ದೇವಸಿಂಹಾಸನವನ್ನು ಏರಿದಾಗ ಏನೇನು ಕೊಡಬಹುದೋ ಅದೆಲ್ಲವನ್ನೂ ಕೊಡಲಾಗಿದೆ. ಇನ್ನು ಶಚೀಪತಿತ್ವದ ಮಾತು. ಅದು ಈ ಸಂದರ್ಭದಲ್ಲಿ ಎತ್ತಬೇಕಾಗಿಲ್ಲ. ಶಚೀದೇವಿಯು ಆ ಇಂದ್ರನ ಪತ್ನಿ. ನಾವು ದುಡುಕಿದರೆ ಅನ್ಯಪತ್ನಿಯನ್ನು ವಿನಿಯೋಗ ಮಾಡಿದ ಅಕಾರ್ಯವನ್ನು ಮಾಡಿದವರಾದೇವು.”

ಋಷಿಗಳು ಒಬ್ಬರು ಎದ್ದು ಹೇಳಿದರು : “ಈಗ ನಮ್ಮ ಮುಂದಿರುವ ಪ್ರಶ್ನವಿದು. ಇಂದ್ರತ್ವ ಪೂರ್ಣವಾಗಬೇಕಾದರೆ ಶಚೀಪತಿತ್ವವೂ ಸೇರಬೇಕು. ಇದುವರೆಗೆ ಇನ್ನೊಬ್ಬ ಇಂದ್ರನನ್ನು ನಾವು ವರಿಸಿರಲಿಲ್ಲ. ಈಗ ವರಿಸಿದ್ದೇವೆ. ಆತನ ಅಧಿಕಾರ ಪೂರ್ಣವಾಗಬೇಕು. ಶಚಿಯಿಲ್ಲದೆ ನಡೆಯುವುದಿಲ್ಲ. ಅದರಿಂದ ಈ ಶಚಿಯು ಅಧಿಕಾರಪ್ರಯುಕ್ತವಾಗಿ ಇಂದ್ರನರ್ಧ ಸಿಂಹಾಸನವನ್ನು ಪಡೆದಿರುವ ಇಂದ್ರಾಣಿಯೇ? ಅಥವಾ ಮನ್ವಂತರದ ಆದಿಯಲ್ಲಿ ಅಧಿಕಾರಕ್ಕೆ ಬಂದ ಇಂದ್ರನನ್ನು ಮದುವೆಯಾದ ಪತ್ನಿಯೇ? ಇದನ್ನು ಈಗ ಇತ್ಯರ್ಥಮಾಡಬೇಕು. ನಾನೇನೋ ‘ಶಚೀದೇವಿಯು ಅಧಿಕಾರ ಪ್ರಯುಕ್ತಳಾದವಳು. ಇಂದ್ರನ ಪಟ್ಟಕ್ಕೆ ಬಂದವರ ಸ್ವತ್ತಾಗಿರಬೇಕು’ ಎಂದು ಅಭಿಪ್ರಾಯಪಡುತ್ತೇನೆ.

ಸಭೆಯಲ್ಲಿ ಗದ್ದಲವೋ ಗದ್ದಲವಾಯಿತು. ಕೆಲವರು “ಇದು ಸ್ತ್ರೀವಿಷಯಕವಾದ ಪ್ರಶ್ನೆ. ಸ್ತ್ರೀಯನ್ನು ಒಮ್ಮೆ ವಿನಿಯೋಗ ಮಾಡಬಹುದೇ ಹೊರತು ಮತ್ತೊಮ್ಮೆ ವಿನಿಯೋಗ ಮಾಡಲು ಯಾರಿಗೂ ಅಧಿಕಾರವಿಲ್ಲ. ಆಕೆಯು ಬೇಕಾದರೆ, ತನ್ನ ಮೇಲೆ ಇತರರದು ಏನೂ ಅಧಿಕಾರವಿಲ್ಲವೆಂದು ಸ್ಪಷ್ಟವಾದ ಮೇಲೆ, ತನ್ನನ್ನು ತಾನು ತನ್ನಿಚ್ಛೆಯಂತೆ ವಿನಿಯೋಗಿಸಿಕೊಳ್ಳಬಹುದು. ಆದರದು ಕಾಮ ವಿನಿಯೋಗವಾಗುವುದೇ ಹೊರತು ಧರ್ಮವಾಗುವುದಿಲ್ಲ” ಎಂದರು.

ಇನ್ನೊಬ್ಬರು ಎದ್ದು ಹೇಳಿದರು : “ಇಲ್ಲಿ ಧರ್ಮಕಾಮಗಳ ಪ್ರಸ್ತಾಪವಿಲ್ಲ. ಅಧಿಕಾರವು ಅರ್ಥಸ್ಥಾನ. ಶಚಿಯು ಆ ಸ್ಥಾನಕ್ಕೆ ಬದ್ಧಳಾಗಿದ್ದರೆ ಆ ಸ್ಥಾನಕ್ಕೆ ಬಂದವರಿಗೆಲ್ಲ ಆಕೆಯಿಂದ ಸೇವೆಯು ಸಲ್ಲಬೇಕು. ಹಾಗಿಲ್ಲದೆ, ಆಕೆಯು ಇಂದ್ರನ ಧರ್ಮಪತ್ನಿಯಾದರೆ ಆ ಮಾತೇ ಬೇರೆ. ಅದನ್ನು ಗೊತ್ತುಮಾಡಿ.”

ಸಭೆಯಲ್ಲಿ ದೀರ್ಘಕಾಲದ ಚರ್ಚೆಯಾಯಿತು. ಕೊನೆಗೆ “ಶಚಿಯು ಅಧಿಕಾರ ಸ್ಥಾನಬದ್ಧಳು. ಅದರಿಂದ ಶಚೀಪತಿತ್ವವೆನ್ನುವುದು ಅಧಿಕಾರ ಸಂಕೇತವೇ ಹೊರತು ಮತ್ತೇನೂ ಅಲ್ಲ. ಅದರಿಂದ ಶಚೀದೇವಿಯು ಹೊಸ ಇಂದ್ರನನ್ನು ಕಾಯೇನ ವಚಸಾ ಮನಸಾ ಸೇವಿಸಲೇಬೇಕು” ಎಂದು ಗೊತ್ತಾಯಿತು.