ಈ ಮಾತನ್ನು ಕಂಠೋಕ್ತವಾಗಿ ಹೇಳಿ ನಿಷ್ಠುರಪಡಿಸುವುದೆಂತು? ಆದರೂ ಆತನನ್ನೇ ನೋಡುತ್ತಿರುವ ಕಣ್ಣು ಏನೇನೋ ಹೇಳುತ್ತಿತ್ತು.
ಆತನೂ ನೆಲವನ್ನು ನೋಡುತ್ತ ಕುಳಿತಿದ್ದಾನೆ. ಏನೋ ಯೋಚನೆಯಲ್ಲಿ ಅನ್ಯಮನಸ್ಕನಾಗಿದ್ದಾನೆ. ಇಲ್ಲದಿದ್ದರೆ ಶಚೀದೇವಿಯ ಯೋಚನೆಗಳನ್ನು ಆತನು ಅರ್ಥಮಾಡಿಕೊಳ್ಳುತ್ತಿದ್ದನೋ ಏನೋ? ಅಂತೂ ಇಬ್ಬರೂ ಬಹಳ ಹೊತ್ತು ಮಾತನಾಡಲಿಲ್ಲ.
ಕೊನೆಗೆ ದೇವಗುರುವು ಮಾತನಾಡಿ : “ದೇವಿ, ಅದರ ಇತ್ಯರ್ಥವು ನಿನ್ನ ಕೈಯ್ಯಲ್ಲಿದೆ. ನಾನು ಏನೂ ತಿಳಿಯದವನಂತೆ ನಿರ್ಣಯವನ್ನು ನಿನಗೂ ಆತನಿಗೂ ಕಳುಹಿಸಿಕೊಡುತ್ತೇನೆ. ನೀನು ನಿರ್ಣಯವನ್ನು ತೆಗೆದುಕೊಂಡು ಆತನ ಬಳಿಗೆ ಹೋಗು. ಆತನಿಗೆ ಹೇಳು : ‘ಇದುವರೆಗೂ ನಾನು ಹಳೆಯ ಇಂದ್ರನನ್ನು ಗಂಡನೆಂದೇ ವ್ಯವಹಾರ ಮಾಡಿದ್ದೇನೆ. ಅದರಿಂದ, ನಾನು ನನ್ನನ್ನು ಯಥೇಚ್ಛವಾಗಿ ವಿನಿಯೋಗಿಸಿಕೊಳ್ಳಬಹುದು. ಆದರೆ, ಧರ್ಮಶಾಸ್ತ್ರದ ಅಡ್ಡಿಯೊಂದಿದೆ. ಸ್ತ್ರೀಯು ದೇಶಾಂತರಗತನಾದ ಪುರುಷನಿಗಾಗಿ ಎಷ್ಟು ದಿನ ಕಾಯಬೇಕು ಎಂದು ಶಾಸ್ತ್ರ ಹೇಳುವುದೋ ಅಷ್ಟು ದಿನ ಕಾದು ನೋಡುವುದಕ್ಕೆ ಅಪ್ಪಣೆಯಾಗಬೇಕು’ ಎಂದು ನಮಸ್ಕರಿಸು, ಆತನು ತಪ್ಪದೆ ಆಗಲೆನ್ನುವನು. ಅಷ್ಟರೊಳಗೆ ವಿಶ್ವಪ್ರಯತ್ನಮಾಡಿ ನಮ್ಮ ಇಂದ್ರನನ್ನು ಹುಡುಕಿಸೋಣ.”
ಶಚಿಗೆ ಮನಸ್ಸು ಏನೋ ಹಗುರವಾದಂತಾಯಿತು. ಆದರೂ ಇನ್ನೂ ಬೆದರಿಕೆ ತಪ್ಪಲಿಲ್ಲ. ಕೇಳಿದಳು : “ಒಂದು ವೇಳೆ ಆತನು ದುಡುಕಿದರೆ? ಹುಡುಕಿದರೂ ಇಂದ್ರನು ಸಿಕ್ಕದೆ ಹೋದರೆ?”
ಬೃಹಸ್ಪತಿಯು ಧೀರಭಾವದಿಂದ ಹೇಳಿದನು : “ಧರ್ಮವನ್ನು ಮೀರುವುದಕ್ಕೆ ಯಾರಿಗೂ ಸಾಧ್ಯವಿಲ್ಲ. ಧರ್ಮದಿಂದಲೇ ಎಲ್ಲವೂ ನಿಂತಿರುವುದು. ಮಹಾವಿಷ್ಣುವನ್ನು ನಾವು ಪೂಜಿಸುವುದು ಧರ್ಮಮಯನೆಂದು. ನೀನು ಹೋಗುವಾಗ ಲಕ್ಷ್ಮೀನಾರಾಯಣನನ್ನು ಪೂಜೆಮಾಡಿ ಹೋಗು. ಆತನು ನೀನು ಹೇಳಿದ ಹಾಗೆ ಕೇಳುವನು. ಅದಕ್ಕಿಂತಲೂ ನೀನು ಹೇಳಿದ ಎರಡನೆಯ ವಿಷಯ ಹೆಚ್ಚು ಗಂಭೀರವಾದುದು. ಬೇಡ ಎಂದಾಗ ತಲೆಮರೆಸಿಕೊಳ್ಳುವುದು ದೇವತೆಗಳಲ್ಲಿ ಹುಟ್ಟುತ್ತಲೆ ಬಂದಿರುವ ಶಕ್ತಿ. ಆದರೆ, ಮರೆಯಾಗಿರುವವರನ್ನು ಕಂಡುಹಿಡಿಯಲು ಏನು ಮಾಡಬೇಕು ಎಂಬುದು ಇಂದ್ರನಿಗೆ ಮಾತ್ರ ಗೊತ್ತು. ಆತನೇ ತಪ್ಪಿಸಿಕೊಂಡಿರಲು, ಇನ್ನು ಯಾರನ್ನು ಕೇಳುವುದು? ಅದನ್ನು ಯೋಚಿಸಬೇಕಾದುದು.”