ಪುಟ:Mahakhshatriya.pdf/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನೀನು ಸ್ಥಲಾಸ್ಥಲ ಪರಿಗಣವಿಲ್ಲದೆ ನಡೆಸಿದ ಪ್ರಶ್ನೋತ್ತರಗಳ ಫಲವನ್ನು ಅನುಭವಿಸಬೇಕಾಗಿದೆ. ನಾನೇನೋ ನಿನಗೊಬ್ಬ ಧರ್ಮಾಚಾರ್ಯನನ್ನು ಕೊಡುವೆನು. ಆದರೆ ಅದರಿಂದ ಅನರ್ಥವಾಗದಂತೆ ನೋಡಿಕೊಳ್ಳುವುದು ನಿನ್ನ ಕಾರ್ಯ.”

ಇಂದ್ರನು ಬ್ರಹ್ಮದೇವನ ಮಾತಿನ ಅರ್ಥವನ್ನು ಪರಿಗ್ರಹಿಸಿದನು. ಆಗುವ ಕಾರ್ಯದಲ್ಲಿ ಏನೋ ವಿಷಾದಬೀಜವಿದೆಯೆನ್ನಿಸಿತು. ಆದರೂ ಅಧಿಕಾರಸಹಜವಾದ ದರ್ಪದಿಂದ “ಇದನ್ನು ಬ್ರಹ್ಮದೇವನ ಪ್ರಸಾದವೆಂದು ಅಂಗೀಕರಿಸುವೆನು. ಇದರಿಂದ ದೇವಕುಲಕ್ಕೆ ಯಶಸ್ಸಾಗಲಿ ಎಂದು ಸ್ವೀಕರಿಸುವೆನು” ಎಂದು ಕೈ ಮುಗಿದನು. ಬ್ರಹ್ಮನು “ಹಾಗೇ ಆಗಲಿ, ನಿನಗೆ ಈ ಭಾವವಿರುವವರೆಗೂ ಏನೂ ಅನರ್ಥವಾಗದಿರಲಿ” ಎಂದು ಆಶೀರ್ವಾದ ಮಾಡಿ, ಮುಂದಿನ ಧರ್ಮಾಚಾರ್ಯನನ್ನು ಸೂಚಿಸಿದನು; “ತ್ವಷ್ಷೃಬ್ರಹ್ಮನ ಮಗನಾದ ವಿಶ್ವರೂಪಾಚಾರ್ಯನುಂಟಲ್ಲ. ಆತನು ಬೃಹಸ್ಪತಿ ಸಮನು. ಮಹಾತೇಜಸ್ವಿಯು. ಸಾಂಗವಾಗಿ ವೇದಗಳನ್ನು ಬಲ್ಲವನು. ಜೊತೆಗೆ ಶಾಂತ ಘೋರಕ್ರಿಯೆಗಳೆರಡನ್ನೂ ಬಲ್ಲವನು. ಶಾಪಾನುಗ್ರಹಶಕ್ತನು. ಆತನಿಗೆ ಮೂರು ಮುಖಗಳು. ಒಂದರಿಂದ ಯಾವಾಗಲೂ ವೇದಪಾರಾಯಣವನ್ನು ಮಾಡುತ್ತಿರುವನು. ಇನ್ನೊಂದರಿಂದ ಮಾತೃವಂಶದವರಿಂದ ಕಲಿತಿರುವ ಸುರಾಪಾನವನ್ನು ಮಾಡುವನು. ಮತ್ತೊಂದರಿಂದ ನಿನಗೆ ಪೌರೋಹಿತ್ಯವನ್ನು ಮಾಡಿಸುವನು. ನೀನು ಹೋಗಿ ಪ್ರಾರ್ಥಿಸಿದರೆ ದೇವತೆಗಳು ತನಗೆ ಪಿತೃಗಳು ಎಂದು ಗೌರವಿಸಿ ನಿಮ್ಮ ಯಾಜನವನ್ನು ಅಂಗೀಕರಿಸುವನು. ಆತನಲ್ಲಿ ತಪ್ಪಿ ನಡೆದರೆ ನಿನಗೆ ಅನರ್ಥವು ತಪ್ಪದು. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಆತನನ್ನು ದೇವಾಚಾರ್ಯನಾಗುವಂತೆ ಪ್ರಾರ್ಥಿಸಿ ಒಪ್ಪಿಸು” ಎಂದನು.

ಇಂದ್ರನು ಬ್ರಹ್ಮದೇವನಿಗೆ ಯಥೋಚಿತವಾಗಿ ಸಮರ್ಚನವನ್ನು ಒಪ್ಪಿಸಿ, ಆತನ ಅಪ್ಪಣೆಯನ್ನು ಪಡೆದು ವಿಶ್ವರೂಪನಲ್ಲಿಗೆ ಹೊರಟನು. ಆತನು ಎಲ್ಲವನ್ನೂ ಕೇಳಿ “ಬ್ರಹ್ಮನಪ್ಪಣೆಯೆಂದು, ಪಿತೃಗಳ ಸೇವೆಯೆಂದು ನಾನು ಈ ಕಾರ್ಯವನ್ನು ನನಗೆ ಇಷ್ಟವಿಲ್ಲದಿದ್ದರೂ ವಹಿಸಿಕೊಳ್ಳುವೆನು. ಅದರೆ, ನಾನು ಯಾವಾಗಲೂ ನನಗೆ ತೋರಿದಂತೆ ನಡೆಯುವವನು. ಒಬ್ಬರ ಅಂಕೆ ಸಂಕೆಗಳಿಗೆ ಬಗ್ಗುವವನಲ್ಲ” ಎಂದು ಹೇಳಿ ಧರ್ಮಾಚಾರ್ಯತ್ವವನ್ನು ಒಪ್ಪಿಕೊಂಡನು. ಇಂದ್ರನು ಆತನ ಸತತ ಸುರಾಪಾನದಲ್ಲಿ ಅಭಿರುಚಿಯಿಲ್ಲದವನಾದರೂ ದೇವಲೋಕದಲ್ಲಿ ವಿಶ್ವರೂಪನು ಸರಿಹೋಗಬಹುದು ಎಂದು ಆತನ ನಿಯಮಗಳೊಡನೆ ಆತನನ್ನು ಒಪ್ಪಿಕೊಂಡನು.