ಪುಟ:Mahakhshatriya.pdf/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ರವಿಕೆಯನ್ನು ಧರಿಸಿದ್ದಾಳೆ. ಅದರ ಮೇಲೆ ಚುಮಕಿಸಿದಂತೆ ಕೆತ್ತಿರುವ ನವರತ್ನಗಳು ಮೃಗಶಿರಾ ನಕ್ಷತ್ರಪುಂಜದಂತೆ ಥಳಥಳ ಎನ್ನುತ್ತಿವೆ. ಕಿವಿಯಲ್ಲಿರುವ ವಜ್ರದ ಓಲೆಗಳು ಪುನರ್ವಸು ಪುಂಜದ ಯೋಗತಾರೆಯಂತೆ, ಎರಡು ದೀಪಗಳನ್ನು ಇಟ್ಟಂತೆ ಬೆಳಗುತ್ತಿವೆ. ಕೊರಳಲ್ಲಿ ಕಟ್ಟಿಕೊಂಡಿರುವ ತಾಳಿಯು ತನ್ನ ಸುತ್ತಲೂ ಇರುವ ಜೀವರತ್ನಗಳಿಗಿಂತ ಪ್ರಕಾಶವಾಗಿ ಮೆರೆಯುತ್ತಿವೆ. ಕೈಯಲ್ಲಿರುವ ರತ್ನದ ಬಳೆಗಳು ಜಂಗಮ ದೇಹಕಾಂತಿಯಂತೆ ಹೊಳೆಯುತ್ತಿವೆ. ಎಡಗೈಯ ಬೆರಳಿನಲ್ಲಿ ಹರಳಿನುಂಗುರವೊಂದು. ಇದರ ಹರಳು ಪೂರ್ವಾಕಾಶದಲ್ಲಿ ಚಂದ್ರನಿಲ್ಲದಿರುವಾಗ ಮೆರೆಯುವ ಸ್ವಾತೀ ನಕ್ಷತ್ರದಂತೆ ವಿರಾಜಿಸುತ್ತಿದೆ. ನಡುವಿನಲ್ಲಿ ಒಂದು ಸಿಂಹ ಮೇಖಲೆ. ತಲೆಯ ಮೇಲೆ ಧರಿಸಿದ ರತ್ನಕಿರೀಟವೂ, ಹಣೆಯ ಮೇಲಿರುವ ಜೀವರತ್ನವೂ, ಹೊದ್ದಿರುವ ವಿದ್ಯುನ್ಮಾಲಾ ಸುಂದರವಾದ ತೆಳುಮೋಡದಂತಿರುವ ಹೊದಿಕೆಯು ಆಕೆಯ ಅಂತಸ್ತನ್ನು ಉದ್ಘೋಷಿಸುತ್ತಿವೆ. ಪ್ರಹರಿಯು ಆಕೆಯನ್ನು ರಾಜಸನ್ನಿಧಾನದಲ್ಲಿ ಬಿಟ್ಟು ನೆಲಮುಟ್ಟಿ ಪ್ರಣಾಮ ಮಾಡಿ ಬಾಗಿಲಿನಿಂದಾಚೆಗೆ ಹೋದಳು.

ಶಚೀದೇವಿಯು ಇಂದ್ರನಿಗೆ ಬಗ್ಗಿ ಪ್ರಣಾಮ ಮಾಡಿದಳು. ವಿರಜಾದೇವಿಯತ್ತ ತಿರುಗಿ ಪ್ರಣಾಮ ಮಾಡುವುದರೊಳಗಾಗಿ ಆಕೆಯೇ ಬಂದು ಶಚೀದೇವಿಯನ್ನು ಆಲಿಂಗಿಸಿ, “ದೇವಿಗೆ ಜಯವಾಗಲಿ ! ನಿನ್ನನ್ನು ಪೂಜಿಸಿ, ನಿನ್ನ ಕೃಪೆಯಿಂದ ದೊಡ್ಡವರಾದವರು ನಾವು. ನಮಗೆ ಆಶೀರ್ವಾದ ಮಾಡಬೇಕು ತಾಯಿ !” ಎಂದು ವಿನಯವಾಗಿ ಆಕೆಯನ್ನು ಮೃದುವಾಗಿ ಆಲಿಂಗಿಸಿ ತನ್ನ ಜೊತೆಯಲ್ಲಿ ತನ್ನ ಆಸನದ ಮೇಲೆ ಕುಳ್ಳಿರಿಸಿಕೊಂಡಳು. ಇಂದ್ರನು ಆ ವೇಳೆಗೆ ಆಸನದಲ್ಲಿ ಮಂಡಿಸಿರುವುದನ್ನು ನೋಡಿ ಶಚಿಯು ತಾನೂ ಕುಳಿತಳು.

ನಹುಷನು ಆಕೆಯನ್ನು ನೋಡಿ ಆಶ್ಚರ್ಯಪಟ್ಟನು. ಉಜ್ಜಲವಾದರೂ ಶಾಂತವಾದ ಆ ರೂಪರಾಶಿಯನ್ನು ಆ ಅಂಗಸೌಷ್ಠವವನ್ನು ಮಿತಿಯನ್ನು ಯಾವ ರೀತಿಯಲ್ಲೂ ಮೀರದಂತೆ, ಜೋಡಿಸಿಟ್ಟಿರುವಂತೆ ಮೆರೆಯುತ್ತಿರುವ ಅಂಗಾಂಗಗಳ ಸೌಭಾಗ್ಯವನ್ನು ನೋಡಿ ವಿಸ್ಮಿತನಾದನು. ಮನುಷ್ಯಲೋಕದಲಿರಲಿ, ದೇವಲೋಕದಲ್ಲಿಯೂ ಅಂತಹ ರೂಪಸೌಭಾಗ್ಯ ಸಂಪನ್ನೆಯಿನ್ನೊಬ್ಬಳಿಲ್ಲ. ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆ, ಯಾರೂ ಆಕೆಯ ಬಳಿಯೂ ನಿಲ್ಲುವಂತಿಲ್ಲ. ಆತನಿಗೆ ಎನ್ನಿಸಿತು ; “ಹೌದು, ಈ ಪುಣ್ಯವಂತೆಯನ್ನು ಪಡೆಯದೆ ಇಂದ್ರಾಧಿಕಾರವು ಯಾವ ರೀತಿಯಲ್ಲೂ ಪೂರ್ಣವಲ್ಲ. ಚೆನ್ನಾಗಿ ಸವಾರಿಯನ್ನು ಬಲ್ಲವನು ಸೊಗಸಾದ ಕುದುರೆಯನ್ನು ನೋಡಿ, ‘ಇದನ್ನೇರಿ ವಿಹರಿಸದಿದ್ದರೆ ನಾನು ಸವಾರಿಯನ್ನು