ಪುಟ:Mahakhshatriya.pdf/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಕಲಿತೇನು ಫಲ?’ ಎಂಬಂತೆ, ಆ ದಿವ್ಯಸ್ತ್ರೀಯನ್ನು ನೋಡಿ, ಆಕೆಯ ಸೌಭಾಗ್ಯಾತಿಶಯವನ್ನು ಕಂಡು, ಆತನ ಮನಸ್ಸು ಒಮ್ಮೆ ತೊನೆಯಿತು. ಕೂಡಲೇ ಆ ಮನಸ್ಸು ಧರ್ಮದತ್ತ ತಿರುಗಿ, ಧರ್ಮಪತ್ನಿಯಾದ ವಿರಜಾದೇವಿಯನ್ನು ಕಂಡು, “ಹೌದು ನದಿಯಲ್ಲಿ ಸಮುದ್ರದಷ್ಟು ನೀರಿಲ್ಲ. ಆದರೂ ಬಾಯಾರಿದವರಿಗೆ ಬೇಕಾದುದು ನದಿಯ ನೀರೇ !” ಎಂದುಕೊಂಡನು.

ಶಚಿಯು ತಾನೇ ಮೊದಲು ಮಾತನಾಡಿದಳು : ದೇವೇಂದ್ರನಿಗೆ ವಿಜಯವಾಗಲಿ ! ದೇವಸಭೆಯು ನಾನು ಇಂದ್ರನನ್ನು ಕಾಯ ವಚಸಾ ಮನಸಾ ಸೇವಿಸಬೇಕೆಂದು ನಿರ್ಣಯಮಾಡಿದೆ. ಆ ಸಭೆಯು ಮಾಡಿದ ನಿರ್ಣಯವೆಂದರೆ ಅದು ನಮ್ಮೆಲ್ಲರಿಗೂ ಶಿರೋಧಾರ್ಯವಾದುದು. ಆದರೆ ಒಂದು ಅಡ್ಡಿಯಿದೆ. ನಾನು ಇಂದ್ರನನ್ನು ಪತಿಯೆಂದು ಸೇವಿಸಿದ್ದೆನು. ಆತನು ಹೊರಟು ಹೋಗುವಾಗ ನಮಗೆ ಯಾರಿಗೂ, ನನಗೂ ಹೇಳದೆ ಹೊರಟುಹೋಗಿರುವುದು ಇನ್ನೂ ಆಶ್ಚರ್ಯವಾಗಿದೆ. ಆತನು ದುಡುಕಿದನೆಂದು ನಾನೂ ದುಡುಕುವುದು ಸ್ತ್ರೀಸ್ವಭಾವಕ್ಕೆ ಸರಿಹೋಗುವುದಿಲ್ಲ. ಅದರಿಂದ, ಧರ್ಮಶಾಸ್ತ್ರದಲ್ಲಿ ದೇಶಾಂತರಗತನಾದ ಪತಿಯನ್ನು ಪತ್ನಿಯಾದವಳು ಎಷ್ಟು ದಿನ ನಿರೀಕ್ಷಿಸಬೇಕು ಎಂದು ಹೇಳಿದೆಯೋ ಅಷ್ಟು ದಿನ ನಿರೀಕ್ಷಿಸಲು ಅಪ್ಪಣೆಯಾಗಬೇಕು.”

ನಹುಷನು ಆಕೆಯ ಮಾತಿನಲ್ಲಿರುವ ಅರ್ಥವನ್ನು ಪೂರ್ಣವಾಗಿ ಗ್ರಹಿಸಿದನು. ಈ ಭಾಮಿನಿಯು ಸ್ಪಷ್ಟವಾಗಿ ಆಡಿರುವ ಮಾತುಗಳಲ್ಲಿ ಶಂಕೆಗೆ ಏನೂ ಕಾರಣವಿಲ್ಲ. “ದೇವೇಂದ್ರನಿಗೆ ವಿಜಯವಾಗಲಿ.” ಆ ಮಾತು ಇಂದಿನ ಇಂದ್ರನಿಗಾದರೂ ಅನ್ವಯಿಸಬಹುದು : ಹಿಂದಿನ ಇಂದ್ರನಿಗಾದರೂ ಅನ್ವಯಿಸಬಹುದು. “ದೇವ ಸಬೆಯು ನಾನು ಇಂದ್ರನನ್ನು ಕಾಯಾ ವಚಸಾ ಮನಸಾ ಸೇವಿಸಬೇಕೆಂದು ನಿರ್ಣಯ ಮಾಡಿದೆ.” ಆದೂ ಅಷ್ಟೆ ! ಉಭಯರಿಗೂ ಅನ್ವಯಿಸುತ್ತದೆ. “ಆದರೆ ನಾನು ಇಂದ್ರನನ್ನು ಪತಿಯೆಂದು ಸೇವಿಸಿದ್ದೇನೆ.” ಅಲ್ಲಿದೆ ವಿಷ. “ನಾನು ಆತನನ್ನು ಪತಿಯೆಂದು ಸೇವಿಸಿರಲು ನಿನಗೆ ಪರಪತ್ನಿ. ಎಚ್ಚರಿಕೆ ! ನಿನ್ನ ಅಧಿಕಾರಬಲದಿಂದ ನೀನು ನನ್ನನ್ನು ಆಕ್ರಮಿಸಿದರೆ, ಈ ಇಂದ್ರಲಕ್ಷ್ಮಿಯು ನಿನಗೆ ದೂರವಾದಾಳು” ಎಂದು ಸ್ಪಷ್ಠಾರ್ಥ. ಇದರ ಮೇಲೆ, ಧರ್ಮಶಾಸ್ತ್ರಿದ ಮಾತೂ ಇದಕ್ಕೆ ಅನುಗುಣವಾಗಿಯೇ ಇದೆ. “ಆಕೆಯು ಈಗ ಮಾಡುವುದು ಪತಿನಿರೀಕ್ಷೆ. ಒಪ್ಪದಿದ್ದರೆ ಧರ್ಮದ್ರೋಹ. ಒಪ್ಪಿದರೆ ಆತ್ಮದ್ರೋಹ. ಆಕೆಯ ನಿರೀಕ್ಷೆಯು ಸಫಲವಾದರೂ ನಮಗೆ ಇಂದ್ರಪದವಿಯಿಲ್ಲ ; ವಿಫಲವಾದರೆ ನಾವಾಗಿ ಕಳೆದುಕೊಳ್ಳಲು ದಾರಿ ಮಾಡಿಕೊಂಡಂತಾಯಿತು. ಅಂತೂ ಈಕೆಯು ಬಂದು, ‘ನೀನು ಇಂದ್ರನಾಗಿರುವುದು