ಪುಟ:Mahakhshatriya.pdf/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಶಚಿಯು ಈ ಉತ್ತರಕ್ಕೆ ಬದ್ಧಳಾಗಿರಲಿಲ್ಲ. ಆಕೆಯ ದೃಷ್ಟಿಯಲ್ಲಿ ನಹುಷನು ‘ಅರ್ಥಪರಃ ಕಾಮಚಪಲ; ಅದರಿಂದ ತನ್ನನ್ನು ಬಯಸಿದನು’ ಎಂದಿತ್ತು. ಆದರೂ ತಾನೇ ಎದುರಿಗೆ ಬಂದಿದ್ದರೂ ಯಾವ ಕಾರ್ಪಣ್ಯಕ್ಕೂ ಎಡಗೊಡದೆ ಸಮಚಿತ್ತನಾಗಿರುವುದನ್ನು ನೋಡಿ ಆಶ್ಚರ್ಯವಾಯಿತು. ಅದುವರೆಗೂ ನಹುಷನೆಂದರೆ ಒಬ್ಬ ಮಾನವ ಎನ್ನುತ್ತಿದ್ದ ಆಕೆ, ಸಮ್ಮುಖದಲ್ಲಿ ನಹುಷನನ್ನು ಕಂಡು, ಆತನ ಆಚಾರವನ್ನು ನೋಡಿ, ಆತನ ಅಂತಸ್ಥವನ್ನು ತಿಳಿದು ವಿಸ್ಮಿತಳಾಗಿದ್ದಾಳೆ. ಋಷಿಪತ್ನಿಗಾಗಿ ಬಾಯಿ ಬಾಯಿ ಬಿಟ್ಟ, ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವುದಕ್ಕೆ ಸಿದ್ಧನಾಗಿದ್ದ ತನ್ನ ಪತಿಯೊಡನೆ ಆತನನ್ನು ಹೋಲಿಸಿ, “ನಹುಷನು ನಿಜವಾಗಿ ಮಹಾನುಭಾವ !” ಎಂಬ ಸಿದ್ಧಾಂತಕ್ಕೆ ಬಂದಿದ್ದಾಳೆ. “ಈತನು ಇಂದ್ರನಾಗಿರುವುದು ಮೂರು ಲೋಕದ ಸೌಭಾಗ್ಯ ! ಆದರೆ, ಆದರೆ, ಹುಂ ವಿಧಿಯಾಟ. ಈ ಮಹಾಪುರುಷನನ್ನು ಈ ಪದವಿಯಿಂದ ಉರುಳಿಸುವ ದೌರ್ಭಾಗ್ಯ ನನ್ನ ಹಣೆಯಲ್ಲಿ ಬರೆದಿದೆಯೋ ಏನೋ?” ಎಂದು ವಿಷಾದಪಡುತ್ತಿದ್ದಾಳೆ. “ಈ ಇಂದ್ರನು ನಿಜವಾಗಿ ಧರ್ಮಪರಾಯಣ” ಎಂದು ಮನಸ್ಸು ಹರ್ಷಗೊಂಡಿದೆ.

ನಹುಷನು ಮತ್ತೊಂದು ಮಾತನ್ನೂ ಆಡದೆ ಮೇಲಕ್ಕೆದ್ದನು. ಅದನ್ನು ಕಂಡು ವಿರಜಾದೇವಿಯು ಮೇಲಕ್ಕೆದ್ದು ಸಡಗರದಿಂದ ಮಂಗಳದ್ರವ್ಯಗಳನ್ನೂ ಫಲತಾಂಬೂಲಗಳನ್ನೂ ಇಟ್ಟಿದ್ದ ರತ್ನದ ತಟ್ಟೆಗಳನ್ನು ತಂದು ಶಚಿದೇವಿಗೆ ಒಪ್ಪಿಸಿದಳು. ಅದೆಲ್ಲವನ್ನೂ ನೋಡಿ ಶಚಿಗೆ ಆನಂದವು ತಾನೇತಾನಾಗಿ ಕಣ್ಣಲ್ಲಿ ನೀರಾಗಿ ಹರಿಯಿತು. ವಿರಜಾದೇವಿಯನ್ನು ಬಾಚಿ ತಬ್ಬಿಕೊಂಡು “ತಂಗೀ, ನಿನ್ನ ವೈಭವವು ಅಖಂಡವಾಗಿ ಇರಲಿ” ಎಂದು ಆಶೀರ್ವಾದ ಮಾಡಿ, ಇಂದ್ರನಿಗೆ ಮತ್ತೆ ಬಗ್ಗಿ ನೆಲಮುಟ್ಟಿ ನಮಸ್ಕಾರಮಾಡಿ ಹೊರಟುಹೋದಳು.

ಆಕೆಯು ಹೊರಕ್ಕೆ ಹೋಗಿ ಕಣ್ಮರೆಯಾದ ಮೇಲೆ, ನಹುಷನು ವಿರಜೆಯನ್ನು ಆಲಿಂಗಿಸಿಕೊಂಡು, “ದೇವಿ, ದೇವತೆಗಳು ತಮ್ಮ ಆಟವನ್ನು ಚೆನ್ನಾಗಿ ಆಡಿದರು” ಎಂದನು. ದೇವಿಯು ಏನು ಎಂದು ತಲೆಯೆತ್ತಿ ನೋಡಲು, ಅರಸನು “ದೇವಿ ದೇವತೆಗಳು ಯಾವಾಗಲೂ ವಿಷಮಿಶ್ರಿತವಾದ ಮೃಷ್ಟಾನ್ನವನ್ನು ವರವಾಗಿ ನಮಗೆ ಕೊಡುವರು. ನಾವು ಆ ಮೃಷ್ಟಾನ್ನವನ್ನು ನೋಡುವೆವೇ ಹೊರತು ಅದರಲ್ಲಿರುವ ವಿಷಯವನ್ನು ಕಾಣಲಾರೆವು. ಅದು ನಮ್ಮ ದುರದೃಷ್ಟ !” ಎಂದನು.

ಅಲ್ಲಿಗು ವಿರಜಾದೇವಿಯು ಅರ್ಥಮಾಡಿಕೊಳ್ಳದಿರಲು, “ಹೋಗಲಿ ಬಿಡು, ಅನಿತ್ಯವಾದ ಅರ್ಥಕ್ಕೆ ಹಾನಿಯಾದರೂ, ನಿತ್ಯವಾದ ಧರ್ಮವನ್ನು ಪಾಲಿಸಿದಂತಾಯಿತು’ ಎಂದನು.