ಪುಟ:Mahakhshatriya.pdf/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಹರಿಯು ತಿಳಿಸಿದಳು. ಮತ್ತೊಂದು ಗಳಿಗೆಯಲ್ಲಿ ಅವರೂ ಅಲ್ಲಿಗೆ ಬಂದರು. ಆಚಾರ್ಯನು ಅವರನ್ನು ಕಂಡು ಸಂತೋಷದಿಂದ “ಅಗ್ನಿ ವಾಯು, ಶಚಿಯು ಗೆದ್ದು ಬಂದಿರುವಳು. ಇನ್ನು ಇಂದ್ರನನ್ನು ಹುಡುಕುವುದು, ಬರಮಾಡುವುದು ನಮ್ಮ ಕೆಲಸ” ಎಂದನು. ಅಗ್ನಿ ವಾಯುಗಳು ಆತನ ಸಂತೋಷದಲ್ಲಿ ಭಾಗಿಗಳಾದರೂ ಆತನ ಉತ್ಸಾಹವು ಅವರಿಗಿರಲಿಲ್ಲ.

ಅವರು ಕೇಳಿದರು : ‘ಎಲ್ಲಕ್ಕಿಂತ ಮೊದಲು ಹೇಳಿ. ಈಕೆಯನ್ನು ಈಗಿನ ಇಂದ್ರನು ಹಿಂದಿನ ಇಂದ್ರನ ಪತ್ನಿಯೆಂದು ಒಪ್ಪಿಕೊಂಡನೋ?”

ಆಚಾರ್ಯನು ಹೇಳಿದನು. ಆ ನುಡಿಯಲ್ಲಿ ಸಂತೋಷವು ತುಂಬಿತ್ತು. “ಅಷ್ಟೇ ಅಲ್ಲ. ಆತನನ್ನು ಹುಡುಕು, ಹುಡುಕಿಸು, ಎಂದೂ ಅಪ್ಪಣೆ ಕೊಟ್ಟಿರುವನಂತೆ.”

“ನಿಜವೆ?”

“ಹೌದು”

“ಹಾಗಾದರೆ, ಆತನು ತನ್ನ ಹಾನಿಯನ್ನು ಮನಗಂಡಿರಬೇಕು.”

“ಸಂದೇಹವಿಲ್ಲ.”

“ಹಾಗಾದರೆ ಪೂರ್ವದ ಇಂದ್ರನು ಬಂದರೂ ಈತನಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕಾದುದು ನಮ್ಮ ಕಾರ್ಯ.”

“ಹೌದು, ಈ ಕಾರ್ಯವನ್ನು ನಾವು ತಪ್ಪದೆ ಮಾಡಬೇಕು. ಅದಿರಲಿ, ಈಗ ಇಂದ್ರನು ಇರುವ ಸ್ಥಳವನ್ನು ಕಂಡುಹಿಡಿಯಬೇಕಲ್ಲಾ”

‘ದೇವ, ನಾವಿಬ್ಬರೂ ತಮ್ಮ ಅಪ್ಪಣೆಯೆಂದಲ್ಲ, ನಮ್ಮ ಸ್ವಂತೇಚ್ಚೆಯಿಂದಲೂ ಹುಡುಕಿದ್ದೇವೆ. ಗಂಡನನ್ನು ಹುಡುಕುವ ಹೆಂಡತಿಯಂತೆ, ಮಕ್ಕಳನ್ನು ಹುಡುಕುವ ಮಾತೆಯಂತೆ, ಮೂರು ಲೋಕಗಳನ್ನು ಹುಡುಕಿದ್ದೇವೆ. ಇನ್ನು ಹೇಗೆ ಹುಡುಕಬೇಕೋ ಅದನ್ನು ತಿಳಿಯದೆ ಇದ್ದೇವೆ, ಏನು ಮಾಡೋಣ?”

ಆಗ ಶಚೀದೇವಿಯು ಹೇಳಿದಳು : “ಆಚಾರ್ಯ, ಇಂದ್ರನು ನನಗೆ ಒಂದು ಮಾರ್ಗವನ್ನು ಹೇಳಿದ್ದನು, ಅದನ್ನು ಈಗ ಮಾಡೋಣವೇ?”

“ಏನು ಹೇಳು ತಾಯಿ.”

“ಅಗ್ನಿ ವಾಯುಗಳಿಗೆ ಸಿಕ್ಕದವರನ್ನು ಉಪಶ್ರುತಿಯಿಂದ ಹಿಡಿಯಬೇಕು ಎಂದಿದ್ದನು.”

ಆಚಾರ್ಯನು ಅದನು ಕೇಳಿ ತಲೆದೂಗಿದನು ; “ಹಾಗಾದರೆ, ವಾಯುವು ನನ್ನ ಬಳಿಗೆ ಬಂದಾಗ ನಾನು ಇದ್ದ ಸ್ಥಳವನ್ನು ಆಕೆಯೇ ತಿಳುಹಿಸಿದಳೋ?

“ಏನೋ ನಾನು ಅದನ್ನು ಕಾಣೆ. ಅಂತೂ ವಾಯುವು ತಮ್ಮನ್ನು ಸಂಧಿಸಿ