ಪುಟ:Mahakhshatriya.pdf/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಹೋದಾಗ, ನೀರು ತನಗೆ ಮೃತ್ಯುಸ್ಥಾನವೆಂದು ಆತನು ಅಲ್ಲಿಗೆ ಹೋಗಲಿಲ್ಲ. ಮತ್ತೆ ದೇವಗುರುವು ಕಳುಹಿಸಿದಾಗ, ಅಲ್ಲಿ ಆತನು ಹತ್ಯೆಯನ್ನು ಕಾಣಲಿಲ್ಲ. ಇದನ್ನು ಇಂದ್ರನು ತಿಳಿದು, ‘ಈತನಿಗೆ ಸಿಕ್ಕಿದರೆ ಹತ್ಯೆಯನ್ನು ಎದುರಿಸಬೇಕಾಗುವುದು’ ಎಂದು ಈತನಿಗೆ ಸಿಕ್ಕಲಿಲ್ಲ. ವಾಯುವಿಗೂ ಹಾಗೆಯೇ ಆಯಿತು. ಈಗ ನಾನು ಕಂಡುಹಿಡಿದ ಕ್ರಮವನ್ನು ಹೇಳುವೆನು ಕೇಳಿ. ಪ್ರತಿಯೊಂದು ಪ್ರಾಣಿಯು ಹೃದಯದಿಂದಲೂ, ಆಯಾ ಪ್ರಾಣಿಗೆ ವಿಚಿತ್ರವಾದ ಒಂದು ಶಬ್ದತರಂಗವು ಯಾವಾಗಲೂ ಬರುತ್ತಿರುವುದು, ಅದನ್ನು ಮೊದಲು ಗೊತ್ತು ಮಾಡಬೇಕು. ಅನಂತರ ಅದೆಲ್ಲಿರುವುದು ಎಂಬುದನ್ನು ಹುಡುಕಿದರಾಯ್ತು ! ಹೀಗೆ ನಾನು ವೀಣೆಯನ್ನು ಬಾರಿಸುತ್ತಾ ಇಂದ್ರತರಂಗವನ್ನು ಸೃಷ್ಟಿಮಾಡಿದೆನು. ಅನಂತರ ಅದೆಲ್ಲಿರುವುದು ಎಂಬುದನ್ನು ನೋಡಿದೆನು. ಅದಕ್ಕೆ ಸಂವಾದಿಯಾದ ಶಬ್ದವು ಮಾನಸದ ಪದ್ಮನಾಳದಿಂದ ಬಂದಿತು. ಸರಿ, ಅಲ್ಲಿಯೇ ಇಂದ್ರನಿರುವನೆಂದು ಗೊತ್ತುಮಾಡಿದೆನು. ಆಯಿತು. ನಿಮ್ಮಲ್ಲಿ ಯಾರಾದರೂ ಆತನನ್ನು ಕಂಡು ಮಾತನಾಡಬೇಕಾದರೆ ನೆನಪಿರಲಿ. ಮಾನಸ ಸರೋವರವು ಆ ಹತ್ಯೆಯ ದೃಷ್ಟಿಗೆ ಬೀಳದಂತೆ ಅದರ ಸುತ್ತಲೂ ತಿರಸ್ಕರಿಣಿಯನ್ನು ಪ್ರಸಾರಮಾಡಿ, ಅನಂತರ ಉಪಬೃಂಹಣ ಮಾಡಿ, ಆಗ ಆತನ ದರ್ಶನವಾಗುವುದು.”

ಶಚೀದೇವಿಯು ಕೈಮುಗಿದುಕೊಂಡು ಕೇಳಿದಳು - “ತಾಯಿ, ಆತನು ಹಿಂದಿರುಗಿಬರಲು ಇನ್ನೆಷ್ಟು ದಿನವಾಗುವುದು ?”

“ಶಚಿ, ಹತ್ಯೆಯನ್ನು ಕಳೆಯುವವರೆಗೂ ಆತನು ಈಚೆಗೆ ಬರಲಾರನು. ಮಹಾವಿಷ್ಣುವಲ್ಲದೆ ಇನ್ನು ಯಾರೂ ಈ ಹತ್ಯೆಯನ್ನು ಕಳೆಯುವ ಉಪಾಯವನ್ನು ಅರಿಯರು. ಅದರಿಂದ ದೇವಾಚಾರ್ಯನನ್ನು ಮಹಾವಿಷ್ಣುವಿನ ಬಳಿಗೆ ಕಳುಹಿಸು. ನೀನು ಹೋಗಿ ಇಂದ್ರದರ್ಶನ ಮಾಡಿ ಬಾ. ನಿನ್ನ ಮನಸ್ಸಿನಲ್ಲಿರುವ ವ್ಯಥೆಯನ್ನು ನಾನು ಬಲ್ಲೆ. ನೀನೇ ತಿಳಿದರೂ ತಿಳಿಯದಂತಿರುವೆ. ನಹುಷನು ಪರನಾರೀ ಸಹೋದರನು. ಆತನಿಗೆ ನೀನು ಬೇಕಿಲ್ಲ. ಅತನು ಇಂದ್ರಪದವಿಯು ಬೇಡವೆಂದನು. ನೀವು ದುಡುಕಿದಿರಿ. ಇಂದ್ರನು ಅದೃಶ್ಯನಾದರೆ ಇಂದ್ರಾಣಿಯಿರಲಿಲ್ಲವೆ ? ಆಕೆಯೇ ಆತನು ಬರುವವರೆಗೂ ರಾಜ್ಯವಾಳಬೇಕಾಗಿತ್ತು. ಅಷ್ಟರಲ್ಲಿ ಅವಸರಪಟ್ಟು ದೇವಸಭೆಯನ್ನು ಕರೆದು ಮಾನವೇಂದ್ರನನ್ನು ಮಹೇಂದ್ರನನ್ನಾಗಿ ಮಾಡಿದಿರಿ. ಅದಕ್ಕಾಗಿ, ಆತನಿಗೆ ಪ್ರೇರಣೆಮಾಡಿ ಆತನಿಂದ ಅಧಿಕಾರ ಪೂರ್ಣವಾಗಿದೆಯೇ ಎಂದು ಕೇಳಿಸಿದೆವು. ಬೃಹಸ್ಪತಿಯು ಅಲ್ಲಿ ಒಂದು ಗಳಿಗೆ ಯೋಚಿಸಿ ಉತ್ತರ ಕೊಡದೆ ದುಡುಕುವಂತೆ ಮಾಡಿ ಶಚೀಪತಿತ್ವವು ಲಭಿಸುವವರೆಗೂ ಅಧಿಕಾರವು