ವಿಷಯಕ್ಕೆ ಹೋಗು

ಪುಟ:Mahakhshatriya.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೩೧.ಗಂಡಹೆಂಡಿರು

ಶಚೀದೇವಿಯು ಗುರುವು ಅನುಗ್ರಹಿಸಿದ ತಿರಸ್ಕರಣಿಯನ್ನು ತೆಗೆದುಕೊಂಡು ಪತಿದರ್ಶನಾರ್ಥವಾಗಿ ಮಾನಸ ಸರೋವರಕ್ಕೆ ಹೋದಳು. ಅಗ್ನಿ ವಾಯುಗಳು ಆಕೆಯ ರಕ್ಷಕರಾಗಿ ಹೋದರು. ಅಗ್ನಿಯು ಹೋಗುತ್ತಾ ದಾರಿಯಲ್ಲಿ ವಾಯುವಿಗೆ ಹೇಳಿದನು ; “ವಾಯು ನನಗೆ ಆ ಹತ್ಯೆಯನ್ನು ಮಾತನಾಡಿಸಬೇಕು ಎನ್ನಿಸುತ್ತದೆ.” ವಾಯುವು ನಗುತ್ತಾ ಹೇಳಿದನು : “ನೀನು ಪ್ರತಿಫಲವನ್ನು ಅನುಭವಿಸಲು ಸಿದ್ಧನಾದರೆ ಯಾವ ಕೆಲಸವನ್ನಾದರೂ ಮಾಡಬಹುದು. ಅದರಲ್ಲಿ ಏನೂ ತಪ್ಪಿಲ್ಲ.”

ಸರಿ, ನಿನ್ನ ಅನುಮತಿಯು ಸಿಕ್ಕಿತು. ಇನ್ನು ದೇವಿಯನ್ನು ಕೇಳುವೆನು: ಎಂದು ಶಚಿಯ ಬಳಿಗೈದು ಕೇಳಿದನು : “ಇಂದ್ರನನ್ನು ಕಾಡುತ್ತಿರುವ ಹತ್ಯೆಯನ್ನು ನೋಡಿ ಬರುವೆನು.”

ಶಚಿಯು ಯೋಚನೆ ಮಾಡಿದಳು : “ಆಗಬಹುದು. ಆದರೆ ನಿನ್ನನ್ನೂ ಅದು ಕಾಡಿದರೆ ?”

“ನಾನು ತಿಳಿದುಕೊಂಡಿರುವುದು ಸರಿಯಾದರೆ, ಅದಕ್ಕೆ ಇರುವ ಕಾಡುವ ಶಕ್ತಿಯು ನಿಯತವಾಗಿರಬೇಕು. ಅದರಲ್ಲಿ ನನ್ನ ಕಡೆಗಷ್ಟು ತಳ್ಳಿದರೆ, ಅದು ಇಂದ್ರನನ್ನು ಕಾಡುವ ಶಕ್ತಿಯು ಕಡಿಮೆಯಾಗುವುದು.”

ವಾಯುವು ಜೊತೆಯಲ್ಲೇ ಹೇಳಿದನು : “ಹಾಗೆ ಇಂದ್ರನಿಗೆ ಕಾಟವು ತಪ್ಪುವಂತಿದ್ದರೆ ನಾನೂ ನಿನ್ನ ಜೊತೆಯಲ್ಲಿ ಬರುತ್ತೇನೆ.”

ಶಚಿಯಪ್ಪಣೆಯನ್ನು ಪಡೆದು ಆಕೆಯ ರಕ್ಷಣೆಗೆ ವಾಯುವನ್ನು ಇಟ್ಟು ಅಗ್ನಿಯು ತಾನು ಆ ಹತ್ಯೆಯನ್ನು ಹುಡುಕಿಕೊಂಡು ಹೋದನು.

ಮಾನಸ ಸರೋವರಕ್ಕೆ ನೈಋತ್ಯದಲ್ಲಿ ಒಂದು ವಿಶಾಲವಾದ ಊಷರಕ್ಷೇತ್ರದಲ್ಲಿ ಎಲ್ಲೋ ಒಂದು ಮುಳ್ಳುಕಂಟೆಯ ಮರೆಯಲ್ಲಿ ಗಾಳಿಯಲ್ಲಿ ಗಾಳಿಯಾಗಿ, ಆ ಹತ್ಯೆಯು ಹಿಮಾಲಯದ ಶೀತವಾತದಲ್ಲಿ ಗಡಗಡನೆ ನಡುಗುತ್ತಾ, ಮೈಯೆಲ್ಲ ಗಾಳಿಯ ತುಂಡಾದಂತೆ ಬಿದ್ದಿದೆ. ಬಳಿಯಲ್ಲಿ ಅಗ್ನಿಯು ಸುಳಿಯಲು ಅದು ಹಾವಿನಂತೆ ಬುಸುಗರೆಯಿತು. ಅಗ್ನಿಯು ವಾಕ್ಕರಣೆಯನ್ನು ಕೊಟ್ಟನು.