ಪುಟ:Mahakhshatriya.pdf/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

“ಸ್ವಾಮಿ, ನಾವು ಏನೂ ಮಾಡಲಾಗುವುದಿಲ್ಲವೆ “ ಎಂದು ಕೇಳಿದರು.

ನೋಡುನೋಡುತ್ತಿದ್ದ ಹಾಗೆಯೇ ಇಂದ್ರಮಂಡಲವು ಪರಿಶುದ್ಧವಾಗುತ್ತ ಬಂತು. ಅದರ ಮಾಲಿನ್ಯವು ಕಳೆಯುತ್ತಾ ಬಂತು. ಇಂದ್ರನು ಈಗ ಸುಖಾಸನದಲ್ಲಿ ಸಮಾಹಿತನಾಗಿ ಕುಳಿತನು. ಕೇಳಿದನು : “ಅಲ್ಲಿ ಏನು ನಡೆದಿದೆ ? ಹೇಳಿ.”

ಅಗ್ನಿ ವಾಯುಗಳು ಹೊಸ ಇಂದ್ರನು ಬಂದಿರುವುದು, ಆತನು ಅಧಿಕಾರ ಪೂರ್ಣತೆಯನ್ನು ಬಯಸಿದುದು, ದೇವಸಭೆಯು ಮಾಡಿದ ನಿರ್ಣಯ, ಹೊಸ ಇಂದ್ರನು ಶಚಿಗೆ ಅವಧಿಯನ್ನು ಕೊಟ್ಟಿರುವುದು, ದೇವಗುರುವು ಮಹಾವಿಷ್ಣುವಿನ ಬಳಿಗೆ ಹೋಗಿರುವುದು, ಎಲ್ಲವನ್ನೂ ಹೇಳಿದರು. ಅದೆಲ್ಲವನ್ನೂ ಕೇಳಿ ಇಂದ್ರನಿಗೆ ಸಮಾಧಾನವಾಯಿತು.

ಇಂದ್ರನು ಹೇಳಿದನು : “ಮಹಾವಿಷ್ಣುವಿನ ಬಳಿಗೆ ದೇವಗುರುವು ಹೋಗಿರುವುದು ಬಹಳ ಸರಿಯಾಯಿತು. ಆತನು ಬರುವವರೆಗೆ ಕೊಂಚ ತಡೆದುಕೊಂಡಿರಿ. ನಾನು ನಹುಷನನ್ನು ಬಲ್ಲೆ. ಧರ್ಮಿಷ್ಠರಲ್ಲಿ ಅಗ್ರಗಣ್ಯರಲ್ಲಿ ಅಗ್ರಗಣ್ಯನು ಆತನು. ನಮ್ಮ ದುರದೃಷ್ಟದಿಂದ ಆತನಿಗೆ ದುರ್ಬುದ್ಧಿಯು ಬರಬೇಕಲ್ಲದೆ, ಅನ್ಯಥಾ ಇಲ್ಲ. ಆದರೂ ನಾವು ಎಚ್ಚರವಾಗಿರಬೇಕು. ನೀವು ಹೋಗಿ ಬನ್ನಿ.”

ಶಚಿಯು ಕೇಳಿದಳು : “ದೇವ, ಮತ್ತೆ ನಿನ್ನನ್ನು ಬಂದು ನೋಡಲು ಅಪ್ಪಣೆ ಕೊಡು.”

“ನನ್ನನ್ನು ನೋಡಬೇಕಾದರೆ ನಿನಗೆಷ್ಟು ಕಷ್ಟ ! ತಿರಸ್ಕರಿಣಿಯಿಲ್ಲದೆ ನನ್ನನ್ನು ನೋಡುವಂತಿಲ್ಲ. ನಾನು ಈಚೆಗೆ ಬರಬೇಕಾದರೆ ನನಗಿನ್ನೂ ಹತ್ಯೆಯ ಭೀತಿಯು ತಪ್ಪಿಲ್ಲ.”

“ವಜ್ರವನ್ನು ಪ್ರಾರ್ಥಿಸಿಕೊಂಡರೋ?”

“ನನಗೇನೋ ಪಾಪವು ಸಂಭವಿಸಿದೆ. ವಜ್ರವನ್ನು ಕುರಿತು ಧ್ಯಾನಿಸಲೂ ನನಗೆ ಧೈರ್ಯವಿಲ್ಲ. ಇರಲಿ, ದೇವಗುರುಗಳು ವೈಕುಂಠದಿಂದ ಬಂದ ಮೇಲೆ ಮತ್ತೆ ಬಾ. ನನಗೂ ನಿನ್ನ ಸಹವಾಸದಲ್ಲಿದ್ದರೆ ಏನೋ ಸುಖ.”

ಶಚಿಯು ನಾಚಿಕೊಂಡು ನಮಸ್ಕಾರ ಮಾಡಿ ಹೊರಟಳು. ಅಗ್ನಿ ವಾಯುಗಳೂ ಬೀಳ್ಕೊಂಡರು. ಇಂದ್ರನು ಎಲ್ಲರನ್ನೂ ಬೀಳ್ಕೊಟ್ಟು ತಾನು ಸೂಕ್ಷ್ಮರೂಪವನ್ನು ಧರಿಸಿ ಮೊದಲಿನಂತೆ ಕಮಲನಾಳದಲ್ಲಿ ಕುಳಿತನು. ಮಾನಸಸರೋವರದ ವಕ್ಷಸ್ಸಿನ ಮೇಲೆ ತೇಲುತ್ತಿದ್ದ ಬಾಷ್ಪಮೇಘವೊಂದು ಮರೆಯಾಯಿತು.