ಪುಟ:Mahakhshatriya.pdf/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅದೊಂದು ಆಂತರೀಯಕವಾದ ಶಕ್ತಿ. ಅದು ನಮಗೆ ಬಂತು. ಒಂದೇ ದಿನವಾಗಲಿ ಇಂದ್ರಭೋಗವನ್ನು ಅನುಭವಿಸಿಯಾಯಿತು. ಇದರಲ್ಲಿ ಸಂಪತ್ತಿಗಿಂತ ವಿಪತ್ತೇ ಹೆಚ್ಚು. ನನಗೆ ತಮ್ಮ ಪಾದಸೇವೆ ಭಾಗ್ಯವಿದ್ದರೆ ಸಾಕು. ನನ್ನ ಪತಿದೇವನು ಇಂದ್ರನಾದರೆ ಪಡುವ ಆನಂದವನ್ನು ಆತನು ಯಃಕಶ್ಚಿತ್ತನಾದರೂ ನಾನು ಪಡೆವೆನೆಂಬ ಭಾಗ್ಯವು ನನಗೆ ಯಾವಾಗಲೂ ಉಂಟೆಂಬ ನಂಬಿಕೆ ಇದೆ. ಅದರಿಂದ ತಾವು ಯೋಚಿಸಿರುವುದು ಸರಿ.”

ನಹುಷನು ತಲೆದೂಗಿದನು “ಹೌದು, ಸಾಮ್ರಾಜ್ಞಿ ನೀನೂ ಸಹ ನನ್ನಂತೆಯೇ ಯೋಚಿಸುವೆಯೆಂಬುದನ್ನು ನಾನು ಬಲ್ಲೆ. ಅಷ್ಟೇ ಅಲ್ಲ. ನಾನು ಮಾಡಿದುದನ್ನು ಒಪ್ಪಿಕೊಳ್ಳುವೆಯೆಂಬುದನ್ನೂ ಬಲ್ಲೆ. ಅದರೂ ಅರ್ಧಾಂಗಿಯಾದ ನಿನ್ನನ್ನು ಕೇಳದೆ ಮಾಡುವುದು ವಿಹಿತವಲ್ಲವೆಂದು ಕೇಳುತ್ತಿದ್ದೇನೆ. ಹಿಂದಿನ ಇಂದ್ರನು ಮಾಡಲು ಹಿಂತೆಗೆಯುತ್ತಿದ್ದುದನ್ನು ಮಾಡೋಣ. ಅಂದು ಭೂಲೋಕದಿಂದ ನಮ್ಮ ಮಕ್ಕಳು ಮೊಮ್ಮಕ್ಕಳು ಎಲ್ಲರನ್ನೂ ಬರಮಾಡಿಕೊಳ್ಳೋಣ. ಆ ಕಾರ್ಯವಾದ ಮೇಲೆ ಈ ಇಂದ್ರಪದವಿಯನ್ನು ನಾವಾಗಿ ಬಿಟ್ಟುಬಿಡೋಣ, ಏನೆನ್ನುವೆ ?”

“ಆಗಬಹುದು. ಆಯಿತು ದೇವ. ತಾವು ಭೂಲೋಕದ ಅಧಿಪತ್ಯವನ್ನು ಮಗನಿಗೆ ಕೊಟ್ಟಿರಿ. ಇಂದ್ರಪದವಿಯನ್ನು ಬಿಟ್ಟುಕೊಡುವಿರಿ. ಆಮೇಲೇನಾಗುವಿರಿ?”

“ವಾನಪ್ರಸ್ಥರಾಗೋಣ. ದೈವಕೃಪೆಯಿಂದ ನಾವಿನ್ನೂ ಮಾನುಷತ್ವವನ್ನುಉಳಿಸಿಕೊಂಡಿದ್ದೇವೆ. ಈ ಗದ್ದಲವನ್ನೆಲ್ಲಾ ಬಿಟ್ಟು ಶಾಂತವಾಗಿ ತಪಸ್ಸು ಮಾಡಿಕೊಂಡು ಇರೋಣ.”

ವಿರಜಾದೇವಿಯು ಅದನ್ನು ಕೇಳಿ ಮೆಚ್ಚಿಕೊಂಡಳು. “ಹೌದು ದೇವ ಬೆಟ್ಟಗಳನ್ನು ಅಲ್ಲಾಡಿಸಿದ ಈ ಗದ್ದಲವನ್ನೆಲ್ಲಾ ಬಿಟ್ಟು ಶಾಂತವಾಗಿ ತಪಸ್ಸು ಮಾಡಿಕೊಂಡು ಇರೋಣ.”

ನಹುಷನು ಸಂತೋಷದಿಂದ ಸಮ್ಮತಿಯನ್ನು ನೀಡಿದ ಸಾಮ್ರಾಜ್ಞಿಯನ್ನು ಅಭಿನಂದಿಸುತ್ತ, ಕೈತಟ್ಟಿ ಪ್ರಹರಿಯನ್ನು ಕರೆದು “ಚಿತ್ರರಥನಿದ್ದರೆ ಬರಹೇಳು” ಎಂದನು. ಉತ್ತರ ಕ್ಷಣದಲ್ಲಿಯೇ ಆತನು ಬಂದು ಕೈಕಟ್ಟಿಕೊಂಡು ನಿಂತು ``ಅಪ್ಪಣೆಗೆ ಕಾದಿದ್ದೇನೆ” ಎಂದನು. ಅರಸನು “ಮಿತ್ರ, ನಿನಗೆ ತೊಂದರೆಯಿಲ್ಲದಿದ್ದರೆ ಇಂದ್ರಪತ್ನಿಯನ್ನು ನಾನು ನೋಡಬೇಕು ಎಂದು ಹೇಳಿ ಬಾ. ಸಾಧ್ಯವಷ್ಟೆ ?” ಎಂದನು. ಚಿತ್ರರಥನು ಅರಸನ ಗೌರವದಿಂದ ಸನ್ಮಾನಿತನಾದುದನ್ನು ಆತನ ಹಸನ್ಮುಖವು ಸೂಚಿಸುತ್ತಿರಲು ‘ಅಪ್ಪಣೆ’ ಎಂದು ಹೊರಟನು. ಅರಸನು ಮತ್ತೊಮ್ಮೆ “ಇಂದ್ರಪತ್ನಿಯನ್ನು ಶಚೀದೇವಿಯನ್ನಲ್ಲ” ಎಂದನು. ಚಿತ್ರರಥನು ತನಗದು