ಪುಟ:Mahakhshatriya.pdf/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರ್ಥವಾಯಿತು ಎಂದು ತಲೆಯನ್ನಾಡಿಸುತ್ತ ಹೊರಟು ಹೋದನು.

ಅರಸನು ಇಂದ್ರಪತ್ನಿಯನ್ನು ಅಲ್ಲಿ ನೋಡುವುದು ಸರಿಯಲ್ಲವೆಂದು ಅರಸಿಯೊಡನೆ ದರ್ಶನಮಂದಿರಕ್ಕೆ ಬಂದನು. ನಾತಿಭರಣಭೂಷಿತಳಾಗಿ ಶಚೀದೇವಿಯು ಬಂದು ಅರಸನನ್ನು ಕಾಣಿಸಿಕೊಂಡಳು. ಅರಸನು ಸತೀಮುಖವಾಗಿ ಆಕೆಯನ್ನು ಬರಮಾಡಿಕೊಂಡನು. ಶಚಿಯು ವಿರಜಾದೇವಿಯೊಡನೆ ಆಸನದಲ್ಲಿ ಕುಳಿತ ಮೇಲೆ ಅರಸನು ಕೇಳಿದನು : “ತಮ್ಮ ಪತಿಮಾರ್ಗವು ಸಫಲವಾಯಿತೆ ?” ಮಾತಿನಲ್ಲಿ ಸರಳತೆಯಿತ್ತು. ಏನೂ ಕೊಂಕುತನವಿರಲಿಲ್ಲ. ಶಚೀದುಃಖದಲ್ಲಿ ಭಾಗಿಯಾದವನ ಸ್ನೇಹಭಾವವಿತ್ತು. ಮೊದಲ ದಿನದ ಏಕವಚನ ಇಂದು ಬಹುವಚನವಾಗಿದ್ದುದು ಆಕೆಗೆ ಹಿಡಿಯಿತು.

ಶಚಿಯು ಗಂಭೀರವಾಗಿ ಚಿರಪರಿಚಿತನಾದ ಸೋದರನೊಡನೆ ಮಾತನಾಡುವ ಸ್ನೇಹದಿಂದ ಹೇಳಿದಳು. ಆದರವಿದ್ದರೂ ಸಲುಗೆಯಿರಲಿಲ್ಲ. “ದೇವರಾಜ, ಆತನು ಹತ್ಯಾಭೀತನಾಗಿ ತಲೆಮರೆಸಿಕೊಂಡಿರುವನೆಂಬುದು ತಿಳಿಯಿತು. ಏನು ಮಾಡಿದರೆ ಆ ಭೀತಿಯು ನಾಶವಾಗುವುದೆಂದು ತಿಳಿದುಬರಲು ದೇವಾಚಾರ್ಯನು ಮಹಾವಿಷ್ಣುವಿನ ಸನ್ನಿಧಿಗೆ ಹೋಗಿಬಂದನು.”

“ನಮ್ಮಿಂದ ಆಗಬೇಕಾಗಿರುವುದು ಏನಾದರೂ ಇದ್ದರೆ ಸಂಕೋಚವಿಲ್ಲದೆ ಹೇಳಬೇಕು.”

“ದೇವ, ತಾವು ಕೇಳುತ್ತಿರುವುದು ನನಗೆ ನಿಜವಾಗಿಯೂ ಸಂಕಟವಾಗಿದೆ. ತಾವು ಧರ್ಮಸೀಮಾಪುರುಷರು. ಬೇಕೆಂದರೆ ನನ್ನ ಇಂದ್ರನು ಹಿಂತಿರುಗಿ ಬರುವುದಾದರೆ ಇಂದ್ರಪದವಿಯನ್ನು ಆತನಿಗೆ ಬಿಟ್ಟುಕೊಡುವುದಕ್ಕೂ ಸಿದ್ಧರಾಗಿರುವಿರಿ. ಅದನ್ನು ನಾನು ಬಲ್ಲೆ. ಆದರೂ, ಆತನು ಈಗಲೇ ಬರುವಂತಿಲ್ಲ. ತಮಗೆ ಈಗ ದೇವಸಭೆಯು ಕೊಟ್ಟಿರುವ ಪದವಿಯು ಇಷ್ಟುಕಾಲವಾದರೂ ನಡೆಯಲೇಬೇಕೆಂಬ ನಿಯಮವುಂಟಾಗಿ ಅದುವರೆಗೂ ಯಾರೂ ತಮ್ಮನ್ನು ಏನೂ ಮಾಡಲಾಗುವುದಿಲ್ಲ. ಅದರಿಂದ ಕಾಲಯಾಪನೆ ಮಾಡಬೇಕು.”

“ನಾನು ಈಗ ತಮಗೆ ಹೇಳಿದುದರ ಉದ್ದೇಶವು ಸಫಲವಾದರೆ ತಾವು ಕಾಲಯಾಪನೆ ಮಾಡಬೇಕಾಗಿಲ್ಲ. ನಾನಾಗಿ ಇಂದ್ರಪದವಿಯನ್ನು ಬಿಟ್ಟುಕೊಡಲು ಸಿದ್ಧನಾಗಿದ್ದೇನೆ.”

ಶಚಿಗೆ ಆಶ್ಚರ್ಯವಾಯಿತು. ಆಕೆಯು ತನ್ನ ಕಿವಿಯನ್ನು ತಾನೇ ನಂಬಲಾರದೆ ಹೋದಳು. ಆಕೆಯ ಕಣ್ಣು ಬಾಯಿ ಮುಖಗಳು ಆಶ್ಚರ್ಯವನ್ನು ತೋರಿಸುತ್ತಿರಲು, ನಿಜವೇ ಎಂದು ಆ ಭಾವವೇ ಕೇಳುತ್ತಿರಲು, ಅರಸನು