ಪುಟ:Mahakhshatriya.pdf/೧೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅದುವರೆಗೂ ಬಗ್ಗಿಸಿದ್ದ ಕತ್ತನ್ನು ಮೇಲಕ್ಕೆತ್ತಿ, ಆಕೆಯ ಮುಖವನ್ನು ಪ್ರಸನ್ನವಾಗಿ, ನೇರವಾಗಿ, ನೋಡುತ್ತ “ಹೌದು, ಇದರಲ್ಲಿ ಸಂದೇಹವಿಲ್ಲ. ನನ್ನದೊಂದು ಕೋರಿಕೆಯಿದೆ. ಅದು ಪೂರೈಸಿದರೆ, ನಾನು ಇಂದ್ರಪಟ್ಟವನ್ನು ಬಿಟ್ಟುಕೊಡಲು ಸಿದ್ಧವಾಗಿದ್ದೇನೆ” ಎಂದನು.

ಶಚಿಗೆ ಏನೂ ಅರ್ಥವಾಗಲಿಲ್ಲ. ‘ಇಂದ್ರಪತ್ನಿಯೆಂದು ತನಗೆ ಕೇಳಿಕಳುಹಿಸಿದ್ದಾನೆಯಾಗಿ ಅತನಲ್ಲಿ ಸಂಶಯಪಡಬೇಕಾಗಿಲ್ಲ. ಶಚೀಪತಿಯಾಗಬೇಕೆಂದು ಕೋರಿದ್ದುಂಟು. ಈಗಿನ ಕೋರಿಕೆ ಅದಿರಲಾರದು. ಆ ಕೋರಿಕೆಯು ನೆರವೇರಿದರೆ ಇಂದ್ರಪದವಿಯನ್ನು ಬಿಟ್ಟುಕೊಡುವುದಾದರೆ, ಅದೆಂತಹ ಕೋರಿಕೆಯಿರಬಹುದು?’ ಎಂದು, ಮೆಲ್ಲಮೆಲ್ಲನೆ “ಆ ಕೋರಿಕೆಯನ್ನು ಕೇಳಬಹುದೆ?” ಎಂದಳು.

ಅರಸನು ನಗುತ್ತಾ, ಆಕೆಯ ಸಂಶಯವನ್ನು ಪೂರ್ಣವಾಗಿ ನಿವಾರಿಸಲು “ಇಂದ್ರಪತ್ನಿ” ಎಂದು ಮನಃಪೂರ್ವಕವಾಗಿ ಸಂಬೋಧಿಸಿ ಹೇಳಿದನು. ಇಂದ್ರ ಪತ್ನಿ ಹಿಂದಿನ ಇಂದ್ರನು ಮಾಡದೆ ಬಿಟ್ಟಿದ್ದ ಕೆಲಸವೇನು ಹೇಳಿ ಅದನ್ನು ನಾನು ಮಾಡಿ ‘ನ ಭೂತೋ ನ ಭವಿಷ್ಯತಿ’ ಎನ್ನಿಸಿಕೊಂಡು, ಇಂದ್ರತ್ವವನ್ನು ಬಿಟ್ಟು ವಾನಪ್ರಸ್ತನಾಗುವೆನು”

ಶಚಿಯು ಬೆಚ್ಚಿದಳು, ತಾನು ಕೇಳುತ್ತಿರುವುದು ನಿಜವೇ? ಎನ್ನಿಸಿತು. ಆದರೆ ಧರ್ಮಪ್ರಭುವಾದ ನಹುಷನು ಮೂರನೆಯಾಶ್ರಮವನ್ನು ಪಡೆಯುವುದಾದರೆ, ವಿರಜಾದೇವಿಯು ಒಪ್ಪುವಳೇ? ಎನ್ನಿಸಿ ಆಕೆಯ ಮುಖವನ್ನು ನೋಡಿದಳು. ಆಕೆಯು ಮುಗುಳುನಗೆಯಿಂದ, “ಹೌದು, ನೀವು ಬರುವವರೆಗೂ ಅದೇ ವಿಚಾರದಲ್ಲಿದ್ದೆವು. ಅವರು ಮಾಡಿದುದು ನನಗೂ ಒಪ್ಪಿಗೆ” ಎಂದಳು.

ಶಚೀದೇವಿಯು ಯೋಚನಾಮಗ್ನಳಾದಳು. “ಇಂದ್ರನು ಮಾಡಲಾರದೆ ಬಿಟ್ಟಿದ್ದ ಕೆಲಸವಾವುದು?” ಅಷ್ಟು ಹೊತ್ತು ಯೋಚಿಸಿದಳು. ಸಿಕ್ಕಿತು. ಆದರೆ ಅದನ್ನು ಹೇಳುವುದು ಹೇಗೆ? ನಹುಷನು ಆಕೆಯ ಮುಖಭಾವದಿಂದಲೇ ಅನಿಷ್ಟ ಸಂಗತಿಯನ್ನು ಹೇಳಲು ಆಕೆಯು ಸಂಕೋಚಪಡುತ್ತಿರುವಳೆಂದು ತಿಳಿದುಕೊಂಡು “ತಾವೇನೂ ಶಂಕಿಸಬೇಕಾಗಿಲ್ಲ, ತಮಗೆ ಕೆಟ್ಟ ಹೆಸರು ಬರುವುದಿಲ್ಲ” ಎಂದನು.

ಆದರೂ ಶಚಿಯು ಹೆದರಿಕೊಂಡು ಮೆಲ್ಲಮೆಲ್ಲಗೆ ಹೇಳಿದಳು “ಸಪ್ತರ್ಶಿಶಿಬಿಕಾ ಎಂದು ಒಂದುಂಟು. ಅದು ಇಂದ್ರನಿಗೆ ಮಾತ್ರ ಸಲ್ಲುವ ಮರ್ಯಾದೆ. ಅದರಲ್ಲಿ ವಿಶೇಷವೆಂದರೆ, ಮನ್ವಂತರದವರೆಗೂ ವೇದರಕ್ಷಣಕ್ಕಾಗಿ